ರೇಷ್ಮೆ ಕೆಲಸ ಮಾಡುವ ಕಾರ್ಮಿಕರೇ ಹೆಚ್ಚಾಗಿರುವ ಪ್ರದೇಶದಲ್ಲಿ ಶಾಲೆಯನ್ನು ನಡೆಸುತ್ತಾ ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ, ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ತಿಳಿಸಿದರು.
ನಗರದ ಹೊರವಲಯದ ಗಾಂಧಿನಗರದಲ್ಲಿನ ವಿಸ್ಡಂ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ ಚಿಣ್ಣರ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಆಗಾದವಾದ ಶಕ್ತಿ ಅಡಗಿದ್ದು ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಬಾಲ್ಯದಲ್ಲೆ ಮಕ್ಕಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡಿ ದೇಶದ ಉತ್ತಮ ಸಾಧಕರಾಗಿ ಬೆಳೆಯುವಂತೆ ಮಾಡಬೇಕು. ಜಗತ್ತಿನ ಎಲ್ಲ ಮಕ್ಕಳ ಬುದ್ಧಿಶಕ್ತಿ ಸಮಾನವಾಗಿರುತ್ತದೆ. ಶಿಕ್ಷಕರು, -ಪಾಲಕರು ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕು. ಮನೆಯಲ್ಲಿ ಪಾಲಕರು ಟಿವಿಯಿಂದ ಹೊರ ಬಂದು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು. ಮಕ್ಕಳಿಗೆ ಎಲ್ಲವನ್ನು ಕೊಟ್ಟು ಕಲಿಕೆಗೆ ಉತ್ತಮ ವಾತಾವರಣ ಇರದಿದ್ದಲ್ಲಿ ಮಕ್ಕಳು ವಿದ್ಯಾವಂತರಾಗುವುದಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳು ವಿವಿಧ ನೃತ್ಯ, ಸಂಗೀತ ಪ್ರದರ್ಶಿಸಿ ಪೋಷಕರು ಮತ್ತು ಪ್ರೇಕ್ಷಕರು ಮೆಚ್ಚುವಂತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲೆಯ ನಿವೇಶನಕ್ಕೆ ಸಹಕಾರ ನೀಡಿರುವ ಗುಲಾಬ್ ಜಾನ್ ಅವರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶ್ರೀನಿವಾಸರೆಡ್ಡಿ, ತನ್ವೀರ್ ಪಾಷ, ರೇಷ್ಮೆ ಇಲಾಖೆಯ ಧರಣಯ್ಯ, ವಿಸ್ಡಂ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿ.ನಾಗರಾಜ್, ಕಾರ್ಯದರ್ಶಿ ಟಿ.ಎ.ಮಾಲಾನಾಗರಾಜ್ ಹಾಜರಿದ್ದರು.
- Advertisement -
- Advertisement -
- Advertisement -