ವೈಯಕ್ತಿಕ ಸ್ವಚ್ಛತೆಯ ಪ್ರಾಮುಖ್ಯ ಅಂಶಗಳಾದ ಸ್ನಾನ, ಉಗುರು ಕಟಾವು, ಶುಭ್ರವಾದ ಬಟ್ಟೆಗಳ ಧಾರಣೆಗಳಂತಹ ದಿನ ನಿತ್ಯದ ಅಭ್ಯಾಸಗಳನ್ನು ಪ್ರತಿ ಮಕ್ಕಳು ರೂಢಿಸಿಕೊಳ್ಳಬೇಕು ಎಂದು ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿ.ಎಂ.ವಿ ಪ್ರೌಢಶಾಲೆಯಲ್ಲಿ ಮಂಗಳವಾರ ರೋಟರಿ ಹೈಗ್ರೌಂಡ್ಸ್ ಸಹಯೋಗದಲ್ಲಿ ‘ಶಾಲೆಯಲ್ಲಿ ಕೈ ತೊಳೆಯುವಿಕೆ’ ಎಂಬ ಸ್ವಚ್ಛ ಹಾಗೂ ಶುದ್ಧತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಕೆಲವೊಂದು ಉತ್ತಮ ಪದ್ಧತಿಗಳನ್ನು ನಾವು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳಬೇಕು. ವೈಜ್ಞಾನಿಕವಾಗಿ ಆ ಪದ್ಧತಿಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ನಮ್ಮ ಈ ಗುಣಗಳು ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಲೂ ಸಹ ನೆರವಾಗುತ್ತದೆ ಎಂದು ಹೇಳಿದರು.
ಊಟಕ್ಕೆ ಮುಂಚೆ ಮತ್ತು ನಂತರ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಬೇಕಾದ ಮಹತ್ವದ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು.
ರೋಟರಿ ಹೈಗ್ರೌಂಡ್ಸ್ ಅಧ್ಯಕ್ಷ ವಿ.ರಾಮಚಂದ್ರ, ಕಾರ್ಯದರ್ಶಿ ಅರವಿಂದ ನಾಯ್ಡು ಮತ್ತು ಸುಭಾಷಿಣಿ ನಾಯ್ಡು ಭಾಗವಹಿಸಿ ಸದ್ವಚ್ಛತೆಯ ಬಗ್ಗೆ ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿ, ಇದಕ್ಕೆ ಸಂಬಂಧಿಸಿದಂತೆ ಪೋಸ್ಟರ್‌ಗಳು, ಪ್ಲೇಕಾರ್ಡ್‌ಗಳನ್ನು ಶಾಲೆಯ ಆವರಣದಲ್ಲಿ ಎಲ್ಲಾ ಕಡೆ ಲಗತ್ತಿಸಿ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅದರಲ್ಲೂ ಕೈಗಳನ್ನು ಶುದ್ಧವಾಗಿಟ್ಟುಕೊಂಡು ರೋಗರುಜಿನಗಳು ಬಾರದಂತೆ ಎಚ್ಚರ ವಹಿಸುವ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಯಾವಾಗಲೂ ಕೈ ತೊಳೆದುಕೊಳ್ಳಿ, ಆಹಾರ ಪದಾರ್ಥಗಳನ್ನು ಮುಟ್ಟುವ ಮುಂಚೆ ಮತ್ತು ಶೌಚಾಲಯ ಉಪಯೋಗಿಸಿದ ಮೇಲೆ ಕೈ ತೊಳೆದುಕೊಳ್ಳಿ, ಸ್ವಚ್ಛವಾದ ಕೈಗಳು ಆರೋಗ್ಯದ ಉಳಿವು ಎಂಬ ಫಲಕಗಳನ್ನು ಶಾಲೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಮುಖ್ಯ ಶಿಕ್ಷಕ ಎನ್.ವೆಂಕಟಮೂರ್ತಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -