ಸ್ವಚ್ಛ ಭಾರತ್ ಕಾಮಗಾರಿಗಳು ಶಿಡ್ಲಘಟ್ಟದ ನಗರದಲ್ಲಿ ಸಂಪೂರ್ಣ ವಿಫಲವಾಗಿದೆ. ಸ್ವಲ್ಪವೂ ಕೆಲಸವಾಗಿಲ್ಲ. ನಗರಸಭೆಯವರು ನೀಡುವ ದಾಖಲೆಗಳು ಮತ್ತು ವಸ್ತು ಸ್ಥಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು “ಸ್ವಚ್ಛ ಸರ್ವೇಕ್ಷಣ್ 2020” ಜಿಲ್ಲಾ ತನಿಖಾಧಿಕಾರಿ ಎನ್.ಮಂಜುಳಾ ತಿಳಿಸಿದರು.
ಶಿಡ್ಲಘಟ್ಟದ ಎಲ್ಲಾ ವಾರ್ಡುಗಳನ್ನು ವೀಕ್ಷಣೆ ಮಾಡಿ ಕಸ ವಿಲೇವಾರಿ, ತ್ಯಾಜ್ಯ ನಿರ್ವಹಣೆ, ಚರಂಡಿ ಶುಚಿತ್ವ ಮುಂತಾದವುಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ನಗರಸಭೆಯವರಿಗೆ ತಿಳಿಸದೆಯೇ ಬಂದು ಬೆಳಗ್ಗೆ ಆರು ಗಂಟೆಯಿಂದ ಪ್ರತಿಯೊಂದು ವಾರ್ಡನ್ನೂ ಪರಿಶಿಲಿಸಿದ್ದೇನೆ. ಇಲ್ಲಿನ ಅನೈರ್ಮಲ್ಯತೆಯನ್ನು ಕಂಡಾಗ ಶಿಡ್ಲಘಟ್ಟದಲ್ಲಿ ನಗರಸಭೆಯವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡುತ್ತದೆ. ಕಾರ್ಮಿಕರು, ತಮಗೆ ಸಂಬಳ ಕೊಡುತ್ತಿಲ್ಲ, ಹೇಗೆ ಕೆಲಸ ಮಾಡುವುದು ಎನ್ನುತ್ತಾರೆ. ಒಟ್ಟಾರೆ ಶಿಡ್ಲಘಟ್ಟದ ನಗರಸಭೆ ಸ್ವಚ್ಛತೆಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ತಮ್ಮ ಬೇಸರ ಮತ್ತು ಅಸಮಧಾನವನ್ನು ವ್ಯಕ್ತಪಡಿಸಿದರು.
ನಗರಸಭೆಯವರು ಯಾವ ರೀತಿ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ ಎಂಬ ವಸ್ತುನಿಷ್ಠ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ನಾವು ನೀಡುವ ಗ್ರೇಡ್ ಆಧಾರದ ಮೇಲೆ ನಗರಸಬೆಯವರಿಗೆ ಅನುದಾನಗಳು ಬಿಡುಗಡೆಯಾಗುತ್ತವೆ. ಇಲ್ಲಿನ ಹದಗೆಟ್ಟ ಪರಿಸ್ಥಿಯನ್ನು ವಿವರಿಸಿ ವರದಿ ನೀಡಲಿದ್ದು, ಅದರನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವರು ಎಂದು ಅವರು ವಿವರಿಸಿದರು.
- Advertisement -
- Advertisement -
- Advertisement -