ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯ ಪ್ರವೇಶ ಧ್ವಾರದಲ್ಲಿ ಶುಕ್ರವಾರ ಕೊರೊನಾ ಸೋಂಕು ನಿವಾರಕ ಟನಲ್ ಉದ್ಘಾಟಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿದರು.
ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಕೊರೊನಾ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ರೇಷ್ಮೆ ಗೂಡಿನ ಮಾರುಕಟ್ಟೆಗೆ ಆಗಮಿಸುವ ರೈತರು ಹಾಗೂ ರೀಲರುಗಳ ಸಮಸ್ಯೆಯನ್ನೂ ಕೇಳಿದ್ದು ಅವನ್ನು ಪರಿಶಿಲಿಸುವುದಾಗಿ ಅವರು ತಿಳಿಸಿದರು.
ಒಂದೆಡೆ ರೇಷ್ಮೆ ಗೂಡಿನ ಬೆಲೆ ಕುಸಿದಿದೆ, ಮತ್ತೊಂದೆಡೆ ಕಚ್ಚಾ ರೇಷ್ಮೆಯನ್ನು ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡಲಾಗದೆ ರೀಲರುಗಳ ಬಳಿ ಹಣದ ಕೊರತೆಯಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ರೇಷ್ಮೆ ಸಚಿವರೊಂದಿಗೆ ಸಮಾಲೋಚಿಸುತ್ತೇನೆ. ರಾಮನಗರದಲ್ಲಿ ಸರ್ಕಾರದ ಕೆ.ಎಸ್.ಎಂ.ಬಿ ವತಿಯಿಂದ ರೇಷ್ಮೆ ಖರೀದಿಸಲು ಪ್ರಾರಂಭಿಸಿರುವಂತೆ ಶಿಡ್ಲಘಟ್ಟದಲ್ಲೂ ಪ್ರಾರಂಭಿಸಲು ತಿಳಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೀಲರುಗಳ ಸಂಘದ ಸದಸ್ಯರು ರೇಷ್ಮೆ ಗೂಡಿನಿಂದ ಕಚ್ಚಾ ರೇಷ್ಮೆ ತೆಗೆದು ಮನೆಯಲ್ಲಿ ದಾಸ್ತಾನು ಮಾಡಿದ್ದೇವೆ. ಮಗ್ಗಗಳನ್ನು ನಿಲ್ಲಿಸಿರುವುದರಿಂದ ಖರೀದಿ ಮಾಡುತ್ತಿಲ್ಲ. ಲಾಕ್ ಡೌನ್ ಎಷ್ಟು ದಿನ ಮುಂದುವರೆಯುತ್ತದೆ ಎಂಬುದರ ಬಗ್ಗೆ ಅನಿಶ್ಚಿತತೆ ಇದೆ. ದಯಮಾಡಿ ಸರ್ಕಾರದಿಂದ ರೇಷ್ಮೆ ನೂಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಅದರ ಶೇ 80 ರಷ್ಟು ಬಡ್ಡಿ ರಹಿತವಾಗಿ ಒತ್ತೆ ಇಟ್ಟುಕೊಂಡು ಹಣವನ್ನು ಕೊಡಿಸುವಂತೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಸಿಇಒ ಫೌಜಿಯಾ ತರನ್ನುಮ್, ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ಪೊಲೀಸ್ ಎಸ್.ಪಿ ಮಿಥುನ್ ಕುಮಾರ್, ತಹಶೀಲ್ದಾರ್ ಕೆ.ಅರುಂಧತಿ, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಪಕ್ಷದ ರಾಮಲಿಂಗಪ್ಪ, ಬಿ.ಸಿ.ನಂದೀಶ್, ಸುರೇಂದ್ರಗೌಡ, ರಾಘವೇಂದ್ರ ಹಾಜರಿದ್ದರು.