ಶುದ್ಧ ಕುಡಿಯುವ ನೀರಿನ ಘಟಕವು ಪ್ರಾರಂಭವಾಗಿದ್ದರೂ ಸಹ ಸಾರ್ವಜನಿಕರಿಗೆ ನೀರು ಕುಡಿಯುವ ಸೌಭಾಗ್ಯ ದೊರೆಯದೆ ನೀರಿಗಾಗಿ ಪರದಾಡುವಂತ ಸ್ಥಿತಿ ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ನಿರ್ಮಾಣವಾಗಿದೆ.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಮಂಜೂರು ಆದ ಶುದ್ಧ ನೀರಿನ ಘಟಕವನ್ನು ಕಳೆದ ಒಂದು ತಿಂಗಳ ಹಿಂದೆ ಶಾಸಕರು ಉದ್ಘಾಟಿಸಿದ್ದರು.
ಉದ್ಘಾಟಿಸಿದ ದಿನದಿಂದ ಇಲ್ಲಿಯವರೆಗೂ ಸಾರ್ವಜನಿಕರಿಗೆ ಶುದ್ಧ ನೀರು ಕುಡಿಯುಲು ಸಾದ್ಯವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದಲ್ಲಿ ಶುದ್ದ ನೀರಿನ ಘಟಕವು ನಿರ್ಮಿಸಿರುವುದು ಗ್ರಾಮಸ್ಥರಿಗೆ ಅನುಕೂಲವಾಗಲೆಂದು. ಇಲ್ಲಿ ೨ ರೂ ನಾಣ್ಯವನ್ನು ಹಾಕಿದರೆ ೨೦ ಲೀಟರ್ ನೀರು ದೊರೆಯುತ್ತದೆ. ಆದರೆ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಸಂಸ್ಕರಣ ಕ್ರಿಯೆ ನಡೆಯುತ್ತಿಲ್ಲ. ನೀರಿನ ಘಟಕವು ಗ್ರಾಮದಲ್ಲಿ ಇದ್ದು ಪ್ರಯೋಜನವಾಗದೆ ಜನರು ಸುತ್ತ- ಮುತ್ತಲಿನ ಗ್ರಾಮಗಳ ನೀರಿನ ಘಟಕದಿಂದ ನೀರನ್ನು ತಂದು ಕುಡಿಯಲು ಬಳಸುತ್ತಿರುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮದ ಹಿರಿಯರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಮಸ್ಯೆಗೆ ಶುದ್ದ ನೀರಿನ ಘಟಕ ನಿರ್ಮಾಣದ ಗುತ್ತಿಗೆದಾರರ ಬೇಜವಾಬ್ದಾರಿಯೇ ಕಾರಣ. ನೀರು ಶುದ್ಧವಾಗಲು ಬಳಸುತ್ತಿರುವ ಯಂತ್ರೋಪಕರಣವನ್ನು ಸರಿಯಾದ ರೀತಿಯಲ್ಲಿ ಅಳವಡಿಸದೆ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಗುತ್ತಿಗೆದಾರನಿಗೆ ಇದನ್ನು ಸರಿಪಡಿಸಲು ತಿಳಿಸಿದರೂ ಅವರು ಸಮಸ್ಯೆಗೆ ಸ್ವಂದಿಸುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗಷ್ಟೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಿಡ್ಲಘಟ್ಟದ ಶಾಸಕ ಎಂ.ರಾಜಣ್ಣ ತಾಲ್ಲೂಕಿನಾದ್ಯಂತ ಅಳವಡಿಸುತ್ತಿರುವ ಶುದ್ಧನೀರಿನ ಘಟಕಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.
ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಕುಸಿದಿದ್ದು ನೀರಿಗೆ ತೊಂದರೆಯಾಗಿದೆ. ಕೊಳವೆ ಬಾವಿ ಆಳಕ್ಕೆ ಕೊರೆದಂತೆಲ್ಲಾ ನೀರು ಕಲುಷಿತವಾಗುತ್ತಿರುವದರಿಂದ ಕುಡಿಯಲು ಯೋಗ್ಯವಲ್ಲದ ನೀರು ಬರುತ್ತಿದ್ದು ಸರ್ಕಾರದ ವತಿಯಿಂದ ಜನರ ಅನುಕೂಲಕ್ಕಾಗಿ ಪ್ರತಿ ಹಳ್ಳಿಗಳಲ್ಲೂ ಶುದ್ಧ ನೀರಿನ ಘಟಕವನ್ನು ಸ್ಥಾಪಿಸುತ್ತಿದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕೆಲವು ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ಇನ್ನೂ ಕೆಲವು ನಿರ್ಮಿಸಿದರೂ ಜನರಿಗೆ ಉಪಯೋಗವಾಗದೆ ಹಾಗೆ ಉಳಿದಿದೆ ಆದ್ದರಿಂದ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
- Advertisement -
- Advertisement -
- Advertisement -