ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ವೀಕ್ಷಣೆ ಮಾಡಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಸೋಮವಾರ ಆಗಮಿಸಲಿದ್ದಾರೆ.
ಹೇಮಾರ್ಲಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾದ ಗ್ರಾಮೀಣ ಉದ್ಯಾನವನವನ್ನು ಸಚಿವರು ಉದ್ಘಾಟಿಸಲಿದ್ದು, ಅದಕ್ಕಾಗಿ ಸಿದ್ಧತೆಗಳು ನಡೆದಿವೆ.
ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೇಮಾರ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಮೀಣ ಉದ್ಯಾನವನ ಉದ್ಘಾಟನೆ, ಚೀಮಂಗಲ ಸರ್ಕಾರಿ ಶಾಲಾ ಕಾಂಪೌಂಡ್, ಮಳೆ ನೀರು ಕೊಯ್ಲು ಪದ್ದತಿ ವೀಕ್ಷಣೆ, ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ಚಿಕ್ಕದಾಸರಹಳ್ಳಿ ಬಳಿ ನಾಲಾಬದು ನಿರ್ಮಾಣ ಕಾಮಗಾರಿ ವೀಕ್ಷಣೆ, ಆನೂರು ಗ್ರಾಮ ಪಂಚಾಯತಿಯ ಬೆಳ್ಳೂಟಿ ಗ್ರಾಮದಲ್ಲಿ ಕಲ್ಯಾಣಿ ವೀಕ್ಷಣೆ, ಅಬ್ಲೂಡು ಗ್ರಾಮ ಪಂಚಾಯತಿಯ ಚೀಮನಹಳ್ಳಿ ಗ್ರಾಮದಲ್ಲಿ ಕುಂಟೆ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಸಂಸದ ಎಸ್.ಮುನಿಸ್ವಾಮಿ,ಶಾಸಕ ವಿ.ಮುನಿಯಪ್ಪ, ಆರ್.ಡಿ.ಪಿ.ಆರ್.ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್, ಆಯುಕ್ತ ಅನಿರುಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಸಿಇಓ ಫೌಝೀಯಾ ತರುನ್ನುಮ್, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ತಿಳಿಸಿದ್ದಾರೆ.