ರೈತರು ತಾಂತ್ರಿಕತೆಯನ್ನು ಅಳವಡಿಸಿಕೊಂಡು ಅತಿ ಹೆಚ್ಚಿನ ಶ್ರದ್ದೆ ವಹಿಸಿ ವ್ಯವಸಾಯ ಮಾಡಿದಾಗ ಮಾತ್ರ ಕೃಷಿಯಲ್ಲಿ ಲಾಭ ಗಳಿಸಬಹುದಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ಕೃಷಿ ಇಲಾಖೆಯಿಂದ ತಾಲ್ಲೂಕಿನ ಜಂಗಮಕೋಟೆಯಲ್ಲಿ ಶುಕ್ರವಾರ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ರೈತರು ತಮ್ಮ ಜಮೀನುಗಳಿಗೆ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಯಾವುದೇ ಬೆಳೆಯಿಡುವ ಮುನ್ನ ಪ್ರತಿಯೊಬ್ಬರೂ ಮಣ್ಣಿನ ಪರೀಕ್ಷೆ ಮಾಡಿಸಿ. ರಾಸಾಯನಿಕ ಗೊಬ್ಬರ ಹಾಕುವ ಮುನ್ನ ಮಣ್ಣಿನಲ್ಲಿ ಯಾವ ಅಂಶದ ಕೊರತೆಯಿದೆ ಎಂದು ತಿಳಿದುಕೊಂಡು ಅಗತ್ಯವಿರುವ ಗೊಬ್ಬರಗಳನ್ನು ಮಾತ್ರ ಬಳಸಿ ಎಂದರು.
ಪೌಷ್ಠಿಕಯುಕ್ತ ಸತ್ವಭರಿತ ಆಹಾರದ ಉತ್ಪಾದನೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಆಹಾರ ಉತ್ಪಾದನೆಗಿಂತ ಆರೋಗ್ಯ ಕಾಪಾಡಲು ನಾವು ಹೆಚ್ಚು ಖರ್ಚು ಮಾಡುತ್ತಿರುವುದು ದುರಂತದ ಸಂಗತಿಯಾಗಿದೆ. ದೇಶೀಯ ರೋಗನಿಯಂತ್ರಣ ಪದ್ಧತಿಗಳನ್ನು ಬಿಟ್ಟು ನಾವೀಗ ಕೀಟನಾಶಕ, ಕಳೆನಾಶಕ, ರೋಗನಾಶಕ ರಾಸಾಯನಿಕಗಳನ್ನು ವಿದೇಶಗಳಿಂದ ತರಿಸಿ ಬಳಸುತ್ತೇವೆ. ಈ ಕಾರಣದಿಂದ ನಮ್ಮ ಆಹಾರ ಬೆಳೆಗಳನ್ನು ವಿದೇಶಿ ಮಾರುಕಟ್ಟೆ ತಿರಸ್ಕರಿಸುತ್ತಿದೆ. ನೀರಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಹನಿಹನಿ ನೀರನ್ನು ಇಂಗಿಸಬೇಕು. ಜೀವಂತಿಕೆಯನ್ನು ತುಂಬುವ ಜಮೀನನ್ನು ತಯಾರು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವಿ.ಮಂಜುನಾಥ್ ಮಾತನಾಡಿ ಇಲಾಖೆಯಿಂದ ಸಿಗುವ ಸವಲತ್ತುಗಳ ಸದುಪಯೋಗ ಪಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು.
ರೈತರಿಗೆ ಮಾಹಿತಿ ನೀಡಲು ವಿವಿಧ ಇಲಾಖೆಗಳ ಮಳಿಗೆಗಳು, ಯಂತ್ರೋಪಕರಣಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಅನುರೂಪ, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರೈತ ಮುಖಂಡರಾದ ಜೆ.ಎಸ್.ವೆಂಕಟಸ್ವಾಮಿ, ಎಸ್.ಎಂ.ರವಿಪ್ರಕಾಶ್. ತಾದೂರು ಮಂಜುನಾಥ್, ಮುನಿಕೆಂಪಣ್ಣ, ಚಿಂತಾಮಣಿ ಕೃಷಿ ಕಾಲೇಜಿನ ಸಹ ಪ್ರಾಧ್ಯಾಪಕ ವಿಶ್ವನಾಥ್, ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಹಾಜರಿದ್ದರು.
- Advertisement -
- Advertisement -
- Advertisement -