ಅಂಗವಿಕಲರನ್ನು ಅನುಕಂಪ, ಅಂತಃಕರಣದಿಂದ ನೋಡುವ ಬದಲು ಸಮಾಜದಲ್ಲಿ ಸಮಾನ ಅವಕಾಶ ನೀಡಬೇಕಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಸ್.ಎಸ್.ಎ ಹಾಗೂ ಆರ್.ಎಂ.ಎಸ್.ಎ ಸಹಯೋಗದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಭಾನುವಾರ ನಡೆಸಿದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಗವಿಕಲರು ಅಶಕ್ತರಲ್ಲ. ಅವರನ್ನು ಅನುಕಂಪ, ಅಂತಃ ಕರಣದಿಂದ ನೋಡಬೇಕಿಲ್ಲ. ಅವರಿಗೆ ಇತರರಂತೆ ಸಮಾನ ಅವಕಾಶ ನೀಡಬೇಕು. ಅವರೂ ಸಹ ಎಲ್ಲರಂತೆ ಸುಗಮವಾಗಿ ಬದುಕುವ ಅವಕಾಶ ಕಲ್ಪಿಸಬೇಕಿದೆ ಎಂದರು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಮಾತನಾಡಿ, ಮೊದಲೆಲ್ಲಾ ಅಂಗವಿಕಲರನ್ನು ನಿಕೃಷ್ಟವಾಗಿ ಕಾಣಲಾಗುತ್ತಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಇದೀಗ ಅವರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಆದರೆ, ಸಮಾನ ಅವಕಾಶ ನೀಡಲಾಗುತ್ತಿಲ್ಲ. ಕೇವಲ ಅವರ ಸಹಾಯಕ್ಕೆ ಉಪಕರಣ ನೀಡಿದರೆ ಅವರು ಸಬಲರಾಗುವುದಿಲ್ಲ. ಬದಲಾಗಿ ಇತರರಂತೆ ಎಲ್ಲಾ ರಂಗಗಳಲ್ಲೂ ಅವರ ಪ್ರತಿಭೆ ಗುರುತಿಸಿ, ಅವಕಾಶ ನೀಡಬೇಕು. ಆಗಲೇ ಅವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ನಗದು ಬಹುಮಾನವನ್ನು ನೀಡಲಾಯಿತು. ಮಡಿಕೆ ಒಡೆಯುವುದು, ಸಂಗೀತ ಕುರ್ಚಿ, ಚಮಚ ಮತ್ತು ನಿಂಬೆಹಣ್ಣಿನ ಓಟ, 100 ಮೀಟರ್ ಓಟ, ಕಪ್ಪೆ ಓಟ ಆಟಗಳು ಹಾಗೂ ಜನಪದ ಗೀತೆ, ಆಶುಭಾಷಣ ಸ್ಪರ್ಧೆ, ರಸಪ್ರಶ್ನೆ, ಚಿತ್ರಕಲೆ, ಛದ್ಮವೇಷ ಸ್ಪರ್ಧೆಗಳನ್ನು ನಡೆಸಲಾಯಿತು.
ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಸ, ಕಡ್ಡಿ, ತ್ಯಾಜ್ಯವನ್ನು ತೆರವುಗೊಳಿಸಿ ಶಾಲಾ ಪರಿಸರವನ್ನು ಸ್ವಚ್ಛಮಾಡಿಸಿಕೊಡಲು ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್ ಅವರಿಗೆ ಶಾಲೆಯ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಬಿ.ಐ.ಇ.ಆರ್.ಟಿ ಅಧಿಕಾರಿಗಳಾದ ಜಗದೀಶ್, ಸತ್ಯನಾರಾಯಣ್, ಸುಬ್ರಮಣ್ಯ, ಸಿ.ಆರ್.ಪಿ ಮತ್ತು ಬಿ.ಆರ್.ಪಿ ಗಳಾದ ಸುಂದರಾಚಾರಿ, ಮಂಜುನಾಥ್, ನರಸಿಂಹರಾಜು, ರಾಜು, ರಮೇಶ್, ನೇತ್ರಾ, ಪ್ರಸನ್ನಕುಮಾರ್ ಹಾಜರಿದ್ದರು.