ಒಂದೆಡೆ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಮತ್ತೊಂದೆಡೆ ಜೆಡಿಎಸ್ ನವರಿಗೆ ಕಾರ್ಯಕ್ರಮಗಳೇ ಇಲ್ಲ. ಅವರು ಅವಕಾಶವಾದಿಗಳು. ಸಿದ್ಧಾಂತ, ತತ್ವ ಹಾಗೂ ನಾಯಕತ್ವವಿಲ್ಲದವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಾಪ್ರಹಾರ ನಡೆಸಿದರು.
ನಗರದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ನವೀಕೃತ ಕಾಂಗ್ರೆಸ್ ಭವನದ ಉದ್ಘಾಟನೆ, ಇಂದಿರಾ ನಮನ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಜೆಡಿಎಸ್ ನವರಿಗೆ 30 ಸೀಟುಗಳೂ ಬರುವುದಿಲ್ಲ. ಅತಂತ್ರ ಸ್ಥಿತಿಯ ಅವಕಾಶಕ್ಕೆ ಕಾಯುತ್ತಿದ್ದಾರೆ. ಅವರದ್ದೇನಿದ್ದರೂ ಸೂಟ್ ಕೇಸ್ ಸಿದ್ಧಾಂತವಷ್ಟೇ ಎಂದು ಲೇವಡಿ ಮಾಡಿದರು.
ಬಂಡವಾಳ ಹೂಡಿಕೆಯಲ್ಲಿ ಹನ್ನೊಂದನೇ ಸ್ಥಾನದಲ್ಲಿದ್ದ ನಮ್ಮ ರಾಜ್ಯ ಈಗಿನ ಸ್ಥಿರ ಸರ್ಕಾರದಿಂದಾಗಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ನೀರಾವರಿ ಯೋಜನೆಗಳಿಗಾಗಿ ಸುಮಾರು 65 ಸಾವಿರ ಕೋಟಿ ರೂಗಳಷ್ಟು ಖರ್ಚು ಮಾಡಿದ್ದೇವೆ. 2013 ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 155 ಕ್ಕೂ ಹೆಚ್ಚು ಈಗಾಗಲೇ ಈಡೇರಿಸಿದ್ದೇವೆ ಎಂದು ಹೇಳಿದರು.
ದೇಶದಲ್ಲಿ ಹಿಂಸೆಗೆ ಪ್ರಚೋದನೆ ನೀಡಲಾಗುತ್ತಿದೆ. ಕೋಮುವಾದಿ ತತ್ವದಿಂದ ದೇಶವನ್ನು ಜನರನ್ನು ವಿಭಜಿಸುವ ವಾತಾವರಣ ಸೃಷ್ಟಿಯಾಗುತ್ತಿದೆ. ದೇಶಕ್ಕೆ ಗಂಡಾತರ ತರುವ ಈ ವಿಷಯವಾಗಿ ಜನರನ್ನು ಎಚ್ಚರಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದು ನುಡಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕ್ಷಣದಿಂದ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳಲು ಬಂದಿದ್ದೇವೆ. ಯಾವ ತಪ್ಪನ್ನೂ ಮಾಡದೆ, ದಕ್ಷ, ಪ್ರಾಮಾಣಿಕ ಹಾಗೂ ಸ್ಥಿರ ಸರ್ಕಾರವನ್ನು ನೀಡಿದ್ದೇವೆ. ರಾಹುಲ್ ಪದಗ್ರಹಣದ ನಂತರ ರಾಜ್ಯದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಬಿಜೆಪಿ 150 ಮಿಷನ್ ನಿಂದ 50ಕ್ಕೆ ಇಳಿದಿದೆ ಎಂದು ವ್ಯಂಗ್ಯವಾಡಿದರು.
ನವೀಕೃತ ಕಾಂಗ್ರೆಸ್ ಭವನವನ್ನು ಉದ್ಘಾಟಿಸಿದ್ದೇವೆ. ಅದು ದೇಗುಲದಂತೆ. ಕಷ್ಟದಲ್ಲಿರುವವರಿಗೆ, ದೀನ ದುರ್ಭಲರಿಗೆ, ಕ್ಷೇತ್ರದ ಜನರಿಗೆ ಸಹಾಯವಾಣಿಯಂತೆ ಈ ಭವನವು ಕಾರ್ಯನಿರ್ವಹಿಸಲಿ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಚಲವಾದಿ ನಾರಾಯಣಸ್ವಾಮಿ, ವೆಂಕಟೇಶ್ವರ, ಜಿ.ಎಸ್.ಕಾರ್ತೀಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಹಾಜರಿದ್ದರು.
- Advertisement -
- Advertisement -
- Advertisement -