ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಶ್ರೀ ಭುವನೇಶ್ವರಿ ಕನ್ನಡ ಯುವಕರ ಸಂಘದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಕೆ.ಎಂ.ಎಫ್ ವ್ಯವಸ್ಥಾಪಕ ಡಾ.ಎಚ್.ಚನ್ನೇಗೌಡ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಮೀಸಲಾಗಬಾರದು, ಅದನ್ನು ದಿನನಿತ್ಯದ ಬದುಕಿನ ಆಚರಣೆಯಾಗಬೇಕು ಎಂದು ಅವರು ತಿಳಿಸಿದರು.
ಕನ್ನಡ ಭಾಷೆ ಭಾವೋಪಯೋಗಿಯಾಗಿ ಮತ್ತು ಲೋಕೋಪಯೋಗಿಯಾಗಿ ಸಮರ್ಥವಾಗಿ ಬಳಕೆಯಾದಾಗ ಅದು ಬೆಳೆಯುತ್ತದೆ ಮತ್ತು ಅರಳುತ್ತದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಕನ್ನಡ ಉಳಿಸಲು ನಾವು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಗ್ರಾಮೀಣ ಸೊಗಡಿನ ಹಳ್ಳಿಯ ಆಟಗಳ ಸ್ಪರ್ಧೆಯನ್ನು ಹರಳಹಳ್ಳಿಯಲ್ಲಿ ಕಸಾಪ ವತಿಯಿಂದ ನಡೆಸುವುದಾಗಿ ತಿಳಿಸಿದರು.
ಶಿಕ್ಷಕ ನಾಗಭೂಷಣ್ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ನಾಗರಿಕ ಸವಾಲುಗಳನ್ನು ಅಷ್ಟೇ ವೇಗವಾಗಿ ಸ್ವೀಕರಿಸಿ, ಅರಗಿಸಿಕೊಂಡು ಭಾಷೆಯು ಸಮರ್ಥವಾಗಿ ಬೆಳೆಯಬೇಕು. ಹೊಸ ಪದಗಳಿಗೆ ಆಲೋಚನೆಗಳಿಗೆ ಒಳಗಾಗುವುದರಿಂದ ಕನ್ನಡ ಬೆಳೆಯುತ್ತಿದೆ. ನಮ್ಮ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ತೆಲುಗನ್ನಡ ಪದಗಳಾದ ದೋಕಾರಿ, ಕೊಡಿವಿಲಿ, ಗೊಡ್ಲಿ, ಮೊಡುಕು, ಮುಗ್ಗು, ಎಕ್ಕು, ತೊಕ್ಕು, ಶೆಂಪಾಕು, ಪುಡುಗೋಕು ಮುಂತಾದವುಗಳು ಭಾಷೆಗೆ ಸ್ಥಳೀಯ ಸೊಗಡನ್ನು ನೀಡುತ್ತದೆ ಎಂದರು.
ಶಿಕ್ಷಕ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ಮೊಬೈಲ್, ಕಂಪ್ಯೂಟರ್ ಮತ್ತು ಕಾನ್ವೆಂಟ್ ದಾಸರಾಗುತ್ತಿರುವುದರಿಂದ ಕನ್ನಡ ಕುಂಠಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ಗ್ರಾಮದ ಹೆಣ್ಣುಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಹರಳಹಳ್ಳಿ ಸೊಣ್ಣೇಗೌಡ, ಬಿಬಿಎಂಪಿ ಎಂಜಿನಿಯರ್ ಎಚ್.ಎಂ.ನಂದಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಸುಮಿತ್ರಾ ಕೃಷ್ಣಪ್ಪ, ಶ್ರೀನಿವಾಸ್, ವೆಂಕಟರೆಡ್ಡಿ, ದ್ಯಾವಪ್ಪ, ಮಹೇಶ್, ಲಕ್ಷ್ಮೀನಾರಾಯಣ್, ಮುರಳಿ ಹಾಜರಿದ್ದರು.
- Advertisement -
- Advertisement -
- Advertisement -