ಒಣ ಬೇಸಾಯದಲ್ಲಿ ಕೃಷಿ ಹಾಗೂ ಪಶುಪಾಲನಾ ಬೆಳೆಗಳನ್ನು ಬೆಳೆಯುವ ಬಗ್ಗೆ ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿಯನ್ನು ಪಡೆದೆವು ಎಂದು ಭಾರತಾಂಬೆ ರೈತಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ ತಿಳಿಸಿದರು.
ಹೈದರಾಬಾದಿನ ಬಳಿಯಿರುವ ಆಂಧ್ರಪ್ರದೇಶ ಅಂತಾರಾಷ್ಟ್ರೀಯ ಬೆಳೆ ಅಧ್ಯಯನ ಸಂಸ್ಥೆ(ಇಕ್ರಿಸ್ಯಾಟ್)ಯ ಕೃಷಿ ತಂತ್ರಜ್ಞಾನ ಮತ್ತು ವಿಸ್ತರಣಾ ಕೇಂದ್ರದಲ್ಲಿ ಎರಡು ದಿನಗಳ ಕಾಲ ಅಧ್ಯಯನ ಪ್ರವಾಸವನ್ನು ರೈತಕೂಟದ ಮಹಿಳೆಯರು ಮುಗಿಸಿ ಬಂದು ತಮ್ಮ ಅನುಭವವನ್ನು ಅವರು ವಿವರಿಸಿದರು.
ವೈವಿಧ್ಯಮಯ ಜೋಳದ ತಳಿಗಳು, ಎಣ್ಣೆ ಕಾಳು ಬೆಳೆಗಳು, ತೊಗರಿ, ಸೋಯಾಬೀನ್ಸ್, ಅವರೆ, ಸೂರ್ಯಕಾಂತಿ ಮೊದಲಾದ ಬೆಳೆಗಳನ್ನು ಒಣ ಬೇಸಾಯದಲ್ಲಿ ಬೆಳೆಯುವ ಬಗ್ಗೆ ನೀರಿನ ಸದ್ಭಳಕೆಯ ಕುರಿತು ಇಕ್ರಿಸ್ಯಾಟ್ ಮುಖ್ಯಸ್ಥ ಡಾ.ಎಂ.ಎಂ.ಶರ್ಮ ಮತ್ತು ಪ್ರಕಾಶ್ ರಾವ್ ತಿಳಿಸಿಕೊಟ್ಟರು.
ಇಕ್ರಿಸ್ಯಾಟ್‌ನಲ್ಲಿ ಕೆರೆಗಳನ್ನು ನಿರ್ಮಿಸಿದ್ದು, ನಮಗೂ ಜಮೀನುಗಳಲ್ಲಿ ಸಣ್ಣ ಕೆರೆ, ಕುಂಟೆ, ಕೃಷಿ ಹೊಂಡಗಳನ್ನು ನಿರ್ಮಿಸಲು ಸಲಹೆ ನೀಡಿದರು. ಅಲ್ಲಿ ಪ್ರತಿಯೊಂದು ಬೀಜ ಬೆಳೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಅವರು ಅಭಿವೃದ್ಧಿ ಪಡಿಸಿರುವ ಕಡಲೆ ಬೀಡ ನಮ್ಮಲ್ಲಿ ಬೆಳೆಯುವುದಕ್ಕಿಂತ ಎರಡೂವರೆ ಪಟ್ಟು ದೊಡ್ಡದಿದೆ. ವಿವಿಧ ಬೆಳೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡೆವು ಎಂದು ವಿವರಿಸಿದರು.
ಇಕ್ರಿಸ್ಯಾಟ್‌ನಲ್ಲಿ ಅಧ್ಯಯನಕ್ಕಾಗಿ ಭಾರತಾಂಬೆ ರೈತಕೂಟದಿಂದ 38 ಮಂದಿ ರೈತ ಮಹಿಳೆಯರು ಹಾಗೂ 12 ಮಂದಿ ಪ್ರಗತಿಪರ ರೈತರು ಹೈದರಾಬಾದಿಗೆ ಹೋಗಿದ್ದೆವು. ನಮ್ಮ ತಂಡದ ನೇತೃತ್ವವನ್ನು ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ. ಗೋಪಾಲಗೌಡ ನಿರ್ವಹಿಸಿದ್ದರು. ವಿಶೇಷವೆಂದರೆ ಎಂದೂ ವಿಮಾನ ಮತ್ತು ರೈಲಿನಲ್ಲಿ ಪ್ರಯಾಣ ಮಾಡದ ನಾವು ಮಹಿಳೆಯರು ಹೋಗುವಾಗ ವಿಮಾನದಲ್ಲಿ ಹೋಗಿ ಬರುವಾಗ ರೈಲಿನಲ್ಲಿ ವಾಪಸಾದೆವು. ಇದು ನಮ್ಮ ಜೀವಮಾನದಲ್ಲಿ ಮರೆಯದ ಪ್ರವಾಸ ಎಂದು ಹೇಳಿದರು.
ಭಾರತಾಂಬೆ ರೈತಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ, ಮಳ್ಳೂರು ವನಿತಾ, ಲಲಿತಮ್ಮ, ನಳಿನ, ಸುಜಾತ, ಸಂಪಂಗಮ್ಮ, ಸರೋಜಮ್ಮ, ಶ್ಯಾಮಲಾ, ನಿರ್ಮಲಮ್ಮ, ಅಮೃತ, ರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -