ನಗರದ ದಿಬ್ಬೂರಹಳ್ಳಿ ಬೈಪಾಸ್ ರಸ್ತೆಯಲ್ಲಿ ಬುಧವಾರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಒಂದೂಕಾಲು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಉಪಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ಇನ್ನು ಐದು ವರ್ಷಗಳಲ್ಲಿ ಜಿಲ್ಲೆಯ ಪ್ರತಿಯೊಂದು ಕೆರೆಯಲ್ಲೂ ನೀರಿರುತ್ತದೆ. ಹದಿಮೂರು ಸಾವಿರ ಕೋಟಿ ರೂಗಳ ಎತ್ತಿನಹೊಳೆ ಯೋಜನೆ, ಒಂದು ಸಾವಿರದ ಮುನ್ನೂರು ಕೋಟಿ ರೂಗಳ ಕೆ.ಸಿ.ವ್ಯಾಲಿ ಹಾಗೂ ಒಂದು ಸಾವಿರ ಕೋಟಿ ರೂಗಳ ಹೆಬ್ಬಾಳ ನಾಗವಾರ ಯೋಜನೆ ಫಲಪ್ರದವಾಗಲಿವೆ ಎಂದು ಅವರು ತಿಳಿಸಿದರು.
ಕೋಚಿಮುಲ್ ನ ಕ್ರಿಯಾಶೀಲ ಕಾರ್ಯಕಾರಿ ಸಮಿತಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿ ರೈತರ ಆಶೋತ್ತರಗಳನ್ನು ನೆರೆವೇರಿಸುತ್ತಿದೆ. ನೆರೆಯ ಆಂಧ್ರ ರಾಜ್ಯದಲ್ಲಿ ನಮ್ಮ ಹಾಲನ್ನು ಮಾರಾಟ ಮಾಡುವುದು, ಕೋಲಾರದಲ್ಲಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೈರಿಯ ನಿರ್ಮಾಣ, ಸಾದಲಿ ಬಳಿ ಫೀಡ್ ಪ್ಲಾಂಟ್ ಗೆ ಅನುಮೋದನೆ ಪಡೆದಿರುವುದು, ಹಾಲು ಉತ್ಪಾದಕರ ಹೆಣ್ಣುಮಕ್ಕಳಿಗೆಂದು ಯಲಹಂಕದಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ ಮುಂತಾದ ಮಹತ್ವದ ಯೋಜನೆಗಳ ಮೂಲಕ ಹೈನುಗಾರರ ಬೆಳವಣಿಗೆಗೆ ಸಹಕರಿಸುತ್ತಿದೆ. ಕೋಚಿಮುಲ್ ಪ್ರತಿದಿನ ೧೫ ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಗುರಿಯನ್ನು ಹೊಂದಲಿ. ಜಿಲ್ಲೆಯ ಕಟ್ಟಕಡೆಯ ಬಡವ ಕೂಡ ಮನೆಗೊಂದು ಹಸುವನ್ನು ಹೊಂದಿದ್ದು ಜೀವನ ನಿರ್ವಹಣೆ ಮಾಡಿಕೊಳ್ಳುವಂತೆ ಕೋಚಿಮುಲ್ ವ್ಯವಸ್ಥೆಯನ್ನು ಬಲಪಡಿಸಲಿ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿ, ಕೋಲಾರದಲ್ಲಿ ೧೬೦ ಕೋಟಿ ರೂ ವೆಚ್ಚದಲ್ಲಿ ಗೋಲ್ಡನ್ ಡೈರಿ ನಿರ್ಮಾಣಕ್ಕೆ ಸರ್ವ ಸಿದ್ಧತೆಯನ್ನು ಮಾಡಲಾಗಿದೆ. ಇನ್ನು ಹದಿನೈದು ದಿನಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಬಳಿ ೨೫ ಎಕರೆ ಜಾಗದಲ್ಲಿ ಪಶು ಆಹಾರ ಘಟಕವನ್ನು ಮುಖ್ಯಮಂತ್ರಿಗಳು ಗುದ್ದಲಿ ಪೂಜೆ ನೆರವೇರಿಸುವರು. ಯಲಹಂಕದಲ್ಲಿ ೧೨ ಸಾವಿರ ಅಡಿ ಸ್ಥಳವನ್ನು ಸರ್ಕಾರದಿಂದ ಪಡೆದಿದ್ದು ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ನಮ್ಮ ಹಾಲು ಸಂಗ್ರಹಣೆಗೆ ಸೂಕ್ತ ಮಾರುಕಟ್ಟೆಯನ್ನು ಹುಡುಕುವ ಮುಖ್ಯ ಪ್ರಯತ್ನದಲ್ಲಿ ಅಮರಾವತಿಯಲ್ಲಿ ನಂದಿನಿ ಹಾಲಿನ ಮಾರಾಟಕ್ಕೆ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸ್ವಂತ ಉಪಕಚೇರಿ ಕಟ್ಟಡ ಆಗಿರುವುದರಿಂದ ಹಲವು ಉಪಯೋಗಗಳಾಗುತ್ತವೆ. ಹಾಲು ಉತ್ಪಾದಕರಿಗೆ ನಿರಂತರವಾಗಿ ತರಬೇತಿ ನೀಡಬಹುದು ಹಾಗೂ ಹೈನುಗಾರಿಕೆ ಅಭಿವೃದ್ಧಿಯು ವೇಗ ಪಡೆಯಲಿದೆ. ಸಾದಲಿ ಬಳಿ ಪಶು ಆಹಾರ ಘಟಕವನ್ನು ೧೦೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಿದ್ದು ಸುಮಾರು ೪೦೦ ಮಂದಿಗೆ ಉದ್ಯೋಗ ದೊರಕಲಿದೆ ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜು ಮಾತನಾಡಿ, ಕೋಲಾರ ಜಿಲ್ಲೆಯ ಮಾಲೂರು ಹೊರತುಪಡಿಸಿದರೆ ಶಿಡ್ಲಘಟ್ಟದಲ್ಲಿ ಸುಸಜ್ಜಿತವಾದ ಶಿಬಿರ ಕ್ಚೇರಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲೂ ಶಿಬಿರ ಕಚೇರಿಯನ್ನು ನಿರ್ಮಿಸಲಾಗುವುದು. ಇದರಿಂದ ವೈದ್ಯಕೀಯ ಮತ್ತು ತಾಂತ್ರಿಕ ಸೌಲಭ್ಯ ಒದಗಿಸಲು ಮತ್ತು ತರಬೇತಿಗೆ ಅನುಕೂಲವಾಗುತ್ತದೆ. ಈಗಿನ ಬರಪರಿಸ್ಥಿತಿಯಲ್ಲಿ ಹಾಲು ಉತ್ಪಾದನೆ ಕುಂಠಿತವಾಗದಂತೆ ತಡೆಯಲು ಸಂಸದರು ಮತ್ತು ಶಾಸಕರು ಮುಖ್ಯಮಂತ್ರಿಗಳ ಮೂಲಕ ಪಶು ಆಹಾರಕ್ಕೆ ಸಹಾಯಧನವನ್ನು ಕೊಡಿಸಬೇಕು ಎಂದು ಕೋರಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸದಸ್ಯ ಸತೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಕೋಮುಲ್ ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಅಶ್ವತ್ಥರೆಡ್ಡಿ, ಜಯಸಿಂಹಕೃಷ್ಣಪ್ಪ, ಜೆ.ಕಾಂತರಾಜು, ಆರ್.ರಾಮಕೃಷ್ಣೇಗೌಡ, ವೈ.ಬಿ.ಅಶ್ವತ್ಥನಾರಾಯಣ, ಆರ್.ಆರ್.ರಾಜೇಂದ್ರಗೌಡ, ಎಂ.ಬೈರಾರೆಡ್ಡಿ, ಕೆ.ಪ್ರಭಾಕರರೆಡ್ಡಿ, ಸುಬ್ಬಾರೆಡ್ಡಿ, ಸುನಂದಮ್ಮ, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಸ್ವಾಮಿ, ಪ್ರಧಾನ ವ್ಯವಸ್ಥಾಪಕ ಡಿ.ಎಂ.ಚಂದ್ರಪ್ಪ, ವ್ಯವಸ್ಥಾಪಕರಾದ ಡಾ.ವಿ.ಎಂ.ರಾಜು, ಡಾ.ಕೆ.ರಾಘವನ್, ಕೆ.ಎನ್.ಗೋಪಾಲಮೂರ್ತಿ, ಉಪವ್ಯವಸ್ಥಾಪಕ ಡಾ.ಬಿ.ವಿ.ಚಂದ್ರಶೇಖರ್, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರೇಗೌಡ, ಅಪ್ಪಾಜಿಗೌಡ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







