26.4 C
Sidlaghatta
Thursday, July 31, 2025

ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ – 14 ನೇ ತಿಂಗಳ ಕಾರ್ಯಕ್ರಮ

- Advertisement -
- Advertisement -

ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಗ್ರಂಥಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 14 ನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಿ ಮತ್ತು ಸಾಹಿತಿ ಮ.ಸುರೇಶ್ ಬಾಬು ಮಾತನಾಡಿದರು.
ಕವಿ ಸಮಯದಲ್ಲಿ ಕವಿತೆ ಹುಟ್ಟುತ್ತದೆ. ಕವನಕ್ಕೆ ಸ್ಫೂರ್ತಿ ಎಲ್ಲಿಂದಲಾದರೂ ಸಿಗಬಹುದು. ಅರ್ಥದೊಂದಿಗೆ ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಕವಿತೆ. ಕವಿಯ ಮನಸ್ಸು ಸರಳ ಸುಂದರವಾದಷ್ಟೂ ಕವಿತೆಯ ಲಾಲಿತ್ಯ ಹೆಚ್ಚಿರುತ್ತದೆ ಎಂದು ಅವರು ತಿಳಿಸಿದರು.
ನಾನು ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿ. ವೃತ್ತಿಯಲ್ಲಿ ವ್ಯಾಪಾರಿ ಆದರೂ ಕನ್ನಡ ಭಾಷೆಯ ಪ್ರೇಮ, ಕನ್ನಡದ ಕವಿಗಳ ಒಡನಾಟ ಮತ್ತು ಪ್ರೋತ್ಸಾಹ ನನ್ನನ್ನು ಕವಿಯಾಗಿಸಿತು. ಪ್ರತಿಯೊಬ್ಬರಲ್ಲಿಯೂ ಒಬ್ಬ ಕವಿಯಿರುತ್ತಾನೆ. ಆದರೆ ಆ ಕವಿಯನ್ನು ಪೋಷಿಸುವ ಹದಗೊಂಡ ಮನಸ್ಸು ನಮ್ಮದಾಗಬೇಗಷ್ಟೆ. ಮೊದಲು ಕಲೆಯನ್ನು ಆಸ್ವಾದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ನಂತರ ಓದುವುದನ್ನು ಹವ್ಯಾಸ ಮಾಡಿಕೊಳ್ಳಬೇಕು. ಆಗ ನಮ್ಮ ಕಣ್ಣುಗಳು ಲೋಕವನ್ನು ವಿಭಿನ್ನವಾಗಿ ನೋಡುತ್ತವೆ. ನಮ್ಮ ಅನುಭವದೊಂದಿಗೆ ಭಾಷೆಯು ಜೊತೆಗೂಡಿ ಪದಪುಂಜಗಳಾಗುತ್ತವೆ. ಆಲೋಚನೆ ಬಂದೊಡನೆ ಎಲ್ಲಿದ್ದರೂ ಬರೆದಿಟ್ಟುಕೊಳ್ಳುತ್ತೇನೆ. ಆನಂತರ ಅದುವೇ ಕವನದ ರೂಪ ಪಡೆಯುತ್ತದೆ ಎಂದು ಹೇಳಿದರು.
ತಮ್ಮ ಕೃತಿಗಳಾದ ಭಾವ ಕಾವೇರಿ, ಮಾನಸ ಚಂದ್ರಿಕೆ, ಚುಕ್ಕಿ ಚಂದ್ರಮ ಮುಂತಾದವುಗಳು ರೂಪುಗೊಂಡ ಬಗ್ಗೆಯನ್ನು ವಿವರಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಎಷ್ಟೋ ಮಂದಿ ಪದವೀಧರರು ಒಂದು ಅರ್ಜಿಯನ್ನು ಬರೆಯಲು ಕಷ್ಟಪಡುತ್ತಾರೆ. ಅಂಥಹುದರಲ್ಲಿ ಎಸ್‌ಎಸ್‌ಎಲ್‌ಸಿ ಓದಿ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿರುವ ಮ.ಸುರೇಶ್ ಬಾಬು ಮಾದರಿಯಾಗಿದ್ದಾರೆ. ಪರಿಶ್ರಮವಿದ್ದಲ್ಲಿ ಸಾಧನೆಗೆ ಏನೂ ಅಡ್ಡಿಯಲ್ಲ. ನಮ್ಮ ಶಿಕ್ಷಣವು ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಮಕ್ಕಳನ್ನು ರೂಪಿಸಲಿ ಎಂದರು.
ಅಜಿತ್‌ ಕೌಂಡಿನ್ಯ ಮಾತನಾಡಿ, ಸಾಹಿತಿ ಮ.ಸುರೇಶ್ ಬಾಬು ಸುಮಾರು 30 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಭಾವ ಕಾವೇರಿ (ಕವನ ಸಂಕಲನ), ಮಾನಸ ಚಂದ್ರಿಕೆ( ಕವನ ಸಂಕಲನ),ಚುಕ್ಕಿ ಚಂದ್ರಮ(ಹನಿಗವನ ಸಂಕಲನ), ಮಾರ್ದನಿ(ಕವಿತೆಗಳು), ಶ್ರೀ ನಗರೇಶ್ವರ ಸ್ವಾಮಿಯ ಸುಪ್ರಭಾತ ಧ್ವನಿಸುರುಳಿಗೆ ಸಾಹಿತ್ಯ ರಚನೆ, ಅರವಿನೊಳಹು ಭಕ್ತಿ ಗೀತೆಗಳನ್ನು ಬರೆದಿರುವರು. ಜಿಲ್ಲಾ ಕಸಾಪದಿಂದ ‘ಚುಕ್ಕಿ ಚಂದ್ರಮ’ ಕವನ ಸಂಕಲನಕ್ಕೆ 2006 ರ ಅತ್ಯುತ್ತಮ ಪುಸ್ತಕ ಪ್ರಶಸ್ತಿ, ರಾಷ್ಟ್ರಮಟ್ಟದ 2007 ರ ಕಸ್ತೂರಬಾ ಗಾಂಧಿ ಸದ್ಬಾವನಾ ಪ್ರಶಸ್ತಿ, 2013 ನೇ ಸಾಲಿನ ಸಾಹಿತಿ ಶ್ರೀ ಹೆಬ್ಬಗೋಡಿ ಗೋಪಾಲ ದತ್ತಿ ಪುಸ್ತಕ ಬಹುಮಾನ ಲಭಿಸಿದೆ ಎಂದು ಲೇಖಕರ ಪರಿಚಯ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕವಿ ಮತ್ತು ಸಾಹಿತಿ ಮ.ಸುರೇಶ್ ಬಾಬು ತಮ್ಮ ಕೃತಿಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಕವಿ ಮತ್ತು ಸಾಹಿತಿ ಮ.ಸುರೇಶ್ ಬಾಬು ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಗ್ರಂಥಪಾಲಕಿ ರಾಮಲೀಲಾ, ಸಿಬ್ಬಂದಿ ಬಾಂಧವ್ಯ, ಚಲನಚಿತ್ರ ನಟ ಸಿ.ಎನ್‌.ಮುನಿರಾಜು, ನಿವೃತ್ತ ಶಿಕ್ಷಕ ಸುಂದರನ್‌, ಅಜಿತ್‌ ಕೌಂಡಿನ್ಯ, ವೃಷಭೇಂದ್ರಪ್ಪ, ಬೆಳ್ಳೂಟಿ ರಮೇಶ್‌, ನಾಗರಾಜ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!