ತಾಲ್ಲೂಕಿನ ಕೊತ್ತನೂರು ಗ್ರಾಮದ ಈಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ‘ಚಿಗುರು’ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ಮಾತನಾಡಿದರು.
ಒಂದೊಂದು ಮಕ್ಕಳಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಆದರೆ, ಅವುಗಳನ್ನು ತೋರ್ಪಡಿಸಲು ಅವರಿಗೆ ವೇದಿಕೆಗಳು ಸಿಕ್ಕಿರುವುದಿಲ್ಲ. ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಪ್ರೋತ್ಸಾಹದಾಯಕ ವೇದಿಕೆಗಳು ಮುಖ್ಯವಾಗುತ್ತವೆ ಎಂದು ಅವರು ತಿಳಿಸಿದರು.
ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭೆ ತೋರಿಸಲು ಅನುಕೂಲ ಮಾಡಿಕೊಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ಮಾತನಾಡಿ, ಚಿಗುರು ಕಾರ್ಯಕ್ರಮದಲ್ಲಿ ೬ರಿಂದ ೧೪ ವರ್ಷಗಳ ಮಕ್ಕಳಲ್ಲಿರುವ ಕಲೆಯನ್ನು ಪ್ರದರ್ಶಿಸಲು ಇಲಾಖೆಯಿಂದ ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಎಳೆಯ ವಯಸ್ಸಿನಲ್ಲಿಯೇ ಪ್ರೋತ್ಸಾಹ ನೀಡಿದಲ್ಲಿ ಅವರ ಉತ್ಸಾಹ ಇಮ್ಮಡಿಯಾಗಿ ಮುಂದೆ ಸಾಧಕರಾಗಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಸಿನಿಮಾ ನಟ ಸಿ.ಎನ್.ಮುನಿರಾಜು ಮಾತನಾಡಿ, ಕಲಾವಿದರಿಗೆ ಪ್ರೋತ್ಸಾಹ ಅತ್ಯಗತ್ಯ. ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಮಂದಿ ಬಾಲ ಕಲಾವಿದರಿದ್ದಾರೆ. ಅವರಿಗೆ ಮಾರ್ಗದರ್ಶನ ಮತ್ತು ಬೆನ್ನುತಟ್ಟುವ ಕೆಲಸವಾಗಬೇಕು. ಕಲೆ ಅರಳಲು ವೇದಿಕೆಗಳು ಸಿಗಬೇಕು. ಮಕ್ಕಳಿಗೆ ಅವರ ಆಸಕ್ತಿ ಕ್ಷೇತ್ರವನ್ನು ಆಯ್ದುಕೊಳ್ಳಲು ಶಿಕ್ಷಕರು ಮತ್ತು ಪೋಷಕರು ನೆರವಾಗಬೇಕು ಎಂದು ನುಡಿದರು.
ಕೋಲಾರದ ಪವಿತ್ರ ಮತ್ತು ತಂಡದ ಕರ್ನಾಟಕ ಶಾಸ್ತ್ರೀಯ ಸಂಗೀತ, ಚಿಕ್ಕಬಳ್ಳಾಪುರ ಸಪ್ತಸ್ವರ ಗಾನ ಮಂಡಳಿಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಮಹೇಶ್ ಕುಮಾರ್ ಮತ್ತು ತಂಡದಿಂದ ಸುಗಮ ಸಂಗೀತ, ಶ್ರೀ ಲಕ್ಷ್ಮೀ ಮತ್ತು ತಂಡದಿಂದ ಜಾನಪದ ಗೀತಗಾಯನ, ಅದಿತಿ ಎನ್ ಸ್ವಾಮಿ ಮತ್ತು ತಂಡದಿಂದ ಶಾಸ್ತ್ರೀಯ ಭರತನಾಟ್ಯ, ಶಿಡ್ಲಘಟ್ಟದ ಶ್ರೀ ಮಯೂರಿ ನಾಟ್ಯ ಕಲಾ ಕೇಂದ್ರದಿಂದ ಸಮೂಹ ನೃತ್ಯ ರೂಪಕ, ಅನನ್ಯ ಎನ್ ಸ್ವಾಮಿ ಮತ್ತು ತಂಡದಿಂದ ಏಕಪಾತ್ರಾಭಿನಯ, ಓಂ ಶ್ರೀ ಸಾಯಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯಿಂದ ಸಮೂಹ ನೃತ್ಯ ರೂಪಕ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎನ್.ರಾಧ, ಪಿ.ಡಿ.ಒ ಅಶ್ವತ್ಥ್, ನಾಡೋಜ ಮುನಿವೆಂಕಟಪ್ಪ, ವೀರಗಾಸೆ ಕಲಾವಿದ ಕೊತ್ತನೂರು ಗಂಗಾಧರ್, ನವೀನ್ ಕುಮಾರ್, ಗ್ರಾಮ ಪಂಚಾಯಿತಿ ಸದಸರಾದ ಗೌರಮ್ಮ, ಕೃಷ್ಣಪ್ಪ, ಆಂಜಿನಪ್ಪ, ಜಸ್ಮಿತ ಡ್ಯಾನ್ಸ್ ಅಕಾಡೆಮಿ ಧನುಶ್ರೀ ಮಾನಸ್, ನೃತ್ಯ ನಿರ್ದೇಶಕ ಸುಬ್ಬು ಹಾಜರಿದ್ದರು.
- Advertisement -
- Advertisement -
- Advertisement -