ಹೊಸ ತಾಂತ್ರಿಕತೆಗಳನ್ನು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಮುಖಾಂತರ ಗ್ರಾಮಗಳಲ್ಲಿ ಸಮಗ್ರವಾಗಿ ಅನುಷ್ಟಾನಗೊಳಿಸುವಂತಹ ‘ಗ್ರಾಮ ಉದಯ್ ಸೇ ಭಾರತ್ ಉದಯ್’ ಅಭಿಯಾನದ ಮೂಲಕ ರೈತರು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ಗೌಡ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿಯ ಆವರಣದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಕೇಂದ್ರ ಸರ್ಕಾರದ ‘ಗ್ರಾಮ ಉದಯ್ ಸೇ ಭಾರತ್ ಉದಯ್’ ಅಭಿಯಾನದ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳ ಮುಖಾಂತರ ರೈತರಿಗೆ ಸಿಗುತ್ತಿರುವ ಸೌಲಭ್ಯಗಳು ಹಾಗೂ ಉಚಿತವಾದ ತರಬೇತಿಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ವೈಜ್ಞಾನಿಕ, ಮತ್ತು ತಂತ್ರಜ್ಞಾನವನ್ನು ಕೃಷಿ ಹಾಗೂ ಕೃಷಿ ಸಂಬಂಧಿತವಾದ ಬೆಳೆಗಳಲ್ಲಿ ಪ್ರಯೋಗ ಮಾಡಿಕೊಳ್ಳುವ ಮೂಲಕ ಉತ್ತಮ ಇಳುವರಿಯನ್ನು ಪಡೆದುಕೊಳ್ಳುವತ್ತ ರೈತರು ಚಿಂತನೆ ನಡೆಸಬೇಕು. ಇಲಾಖೆಗಳಿಂದ ಸಿಗುವಂತಹ ಲಘು ಪೋಷಕಾಂಶಗಳನ್ನು ಪಡೆದುಕೊಂಡು ಭೂಮಿಗೆ ಹಾಕಿ ಫಲವತ್ತತೆಯನ್ನು ಕಾಪಾಡಬೇಕು. ಇಲಾಖೆಗಳ ಅಧಿಕಾರಿಗಳೂ ಕೂಡಾ ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ರೈತರನ್ನು ಒಟ್ಟುಗೂಡಿಸಿ ಯೋಜನೆಗಳ ಬಗ್ಗೆ ಸ್ವಷ್ಟವಾಗಿ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಟಿ.ದೇವೇಗೌಡ ಮಾತನಾಡಿ, ಇಲಾಖೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಸಕಲ ರೀತಿಯಲ್ಲೂ ಸಜ್ಜಾಗಿದ್ದೇವೆ. ಪ್ರತಿಯೊಂದು ಗ್ರಾಮ ಪಂಚಾಯತಿವಾರು, ಕರಪತ್ರಗಳನ್ನು ಹಂಚಿಕೆ ಮಾಡುವ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಅನೇಕ ಮಾಹಿತಿಯುಳ್ಳ ರಥವನ್ನು ಪಂಚಾಯತಿಯ ಕೇಂದ್ರಸ್ಥಾನಗಳಿಗೆ ಕಳುಹಿಸಿಕೊಡುವುದರ ಜೊತೆಗೆ ರೈತರಿಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸಿಕೊಡಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದನ್ನು ಬಿಟ್ಟು ಲಘುಪೋಷಕಾಂಶಗಳ ಜೊತೆಗೆ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸುವಂತೆ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆನಂದ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಜಂಗಮಕೋಟೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಗೋಪಾಲರಾವ್, ಮಧು, ಕನಕಮ್ಮ, ಶ್ರೀನಿವಾಸ್, ಪಿಳ್ಳಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -