ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ವಿದ್ಯಾ ಸಂಸ್ಥೆಗೆ ಶನಿವಾರ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಸಮಯ ಅಮೂಲ್ಯವಾದುದು. ವಿದ್ಯಾರ್ಥಿಗಳು ಅಮೂಲ್ಯವಾದ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದರ ಮುಖಾಂತರ ಜೀವನದಲ್ಲಿ ಮುಂದೆ ಬರಬೇಕು. ಈಗಿನ ನಿಮ್ಮ ಅಧ್ಯಯನ, ಜ್ಞಾನ ಸಂಗ್ರಹಣೆಯು ಬೀಜ ಬಿತ್ತಿದಂತೆ. ಅದು ಮುಂದೆ ಮರವಾಗಿ ಫಲಕೊಡುವುದು ಖಚಿತ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ಶ್ರದ್ದೆಯಿಂದ ಕಲಿತಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಕೇವಲ ತಮ್ಮ ಮನೆಗಳಿಗೆ ಮಾತ್ರ ಮಕ್ಕಳಾಗದೇ ಇಡೀ ದೇಶದ ಮಕ್ಕಳಾಗಬೇಕು. ಸುತ್ತಲೂ ಇರುವ ಎಲ್ಲ ಸಮುದಾಯದವರನ್ನು ಪ್ರೀತಿಸುವ ಹಾಗು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ದ್ವೇಷ ಮನೋಭಾವನೆ ಬೆಳೆಸಿಕೊಳ್ಳಬೇಡಿ. ಸಾಧಕರ ಜೀವನ ಶೈಲಿಯನ್ನು ಅನುಸರಿಸುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದರು.
ನಗರದ ಹೊರವಲಯದಲ್ಲಿರುವ ಬಿಜಿಎಸ್ ವಿದ್ಯಾ ಸಂಸ್ಥೆ ಸುಂದರ ವಾತಾವರಣದಲ್ಲಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲಕರವಾಗಿದೆ. ಇಂತಹ ಸುಂದರ ಪರಿಸರದ ನಡುವೆ ಕಲಿಯುವ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ತಾವು ಸದಾ ಸಿದ್ದರಾಗಿರುತ್ತೇವೆ ಎಂದರು.
ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಪ್ರಾಂಶುಪಾಲ ಆರ್.ಮಹದೇವ್ ಹಾಜರಿದ್ದರು.
- Advertisement -
- Advertisement -
- Advertisement -