ನಗರದ ಮುತ್ತೂರು ಬೀದಿಯಲ್ಲಿರುವ ಶಿಕ್ಷಕ ಸುಂದರಾಚಾರಿ ಅವರ ಮನೆಯಲ್ಲಿ ತಾಲ್ಲೂಕು ವಚನ ಸಾಹಿತ್ಯ ಪರಿಷತ್‌ನಿಂದ ಶನಿವಾರ ಆಯೋಜಿಸಲಾಗಿದ್ದ ಮನೆ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷಿಪಂಡಿತ ಪ್ರಶಸ್ತಿ ಪುರಸ್ಕೃತ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ಮಾತನಾಡಿದರು.
ರೈತನ ಕಷ್ಟ ಸುಖಗಳಿಗೆ ಸ್ಪಂದಿಸುವುದು, ಹಳ್ಳಿ ಹೆಣ್ಣುಮಕ್ಕಳ ಜಾನಪದ ಹಾಡುಗಳಿಗೆ ಪ್ರೋತ್ಸಾಹಿಸುವುದು ಮತ್ತು ಅವನ್ನೆಲ್ಲಾ ದಾಖಲಿಸುವುದು ಸಹ ಕನ್ನಡದ ಕಾರ್ಯಕ್ರಮ ಆಗುತ್ತದೆ ಎಂದು ಅವರು ತಿಳಿಸಿದರು.
ಸಾಹಿತ್ಯದ ಕಾರ್ಯಕ್ರಮಗಳು ಕೇವಲ ಮನೆ, ಅಥವ ನಾಲ್ಕು ಗೋಡೆಗಳಿಗಷ್ಟೇ ಸೀಮಿತಗೊಳಿಸದೇ ಪೃಕೃತಿಯ ನಡುವೆ ನಡೆಯುವಂತಾಗಬೇಕು. ಇದರಿಂದ ಎಲ್ಲ ಕಡೆ ಕನ್ನಡದ ವಾತಾವರಣ ಮೂಡುವುದರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ಸಾಹಿತ್ಯ ಎಂದ ಮಾತ್ರಕ್ಕೆ ಕತೆ, ಕವನಗಳ ರಚನೆ, ಸಾಹಿತ್ಯ ರಚನೆ ಎಂದು ಭಾವಿಸಬೇಕಿಲ್ಲ. ಪುಸ್ತಕ ಓದುವುದು, ನಮ್ಮ ಮಾತೃ ಭಾಷೆಯನ್ನು ಮನೆಯಲ್ಲೂ, ವ್ಯವಹಾರದಲ್ಲೂ ಬಳಸುವುದು ಸಹ ಕನ್ನಡದ ಬೆಳವಣಿಗೆಗೆ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ತಾವು ಕಾರ್ಯಕ್ರಮಗಳನ್ನು ಆಯೋಜಿಸುವುದಾದರೆ ನಮ್ಮ ತೋಟದಲ್ಲಿ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು.
ವಚನ ಸಾಹಿತ್ಯ ಪರಿಷತ್‌ನ ತಾಲ್ಲೂಕು ಅಧ್ಯಕ್ಷ ಟಿ.ನಾರಾಯಣಸ್ವಾಮಿ ಮಾತನಾಡಿ ವಚನಕಾರರು ತಮ್ಮ ಬದುಕು ಹೇಗಿರಬೇಕು, ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಬಗ್ಗೆ ವಚನಗಳ ಮೂಲಕ ವಿವರಿಸಿದ್ದಾರೆ. ಅವರ ವಚನಗಳನ್ನು ಅರ್ಥ ಮಾಡಿಕೊಂಡು ಅದರಂತೆ ನಾವು ಬದುಕಿದರೆ ನಾವೂ ಚೆಂದ, ನಮ್ಮ ಅಕ್ಕ ಪಕ್ಕದವರ ಬದುಕು ಚೆಂದವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ಶಿಕ್ಷಕ ಸುಂದರಾಚಾರಿ ದಂಪತಿಗಳನ್ನು ತಾಲ್ಲೂಕು ವಚನ ಸಾಹಿತ್ಯ ಪರಿಷತ್‌ನಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲಕ್ಷ್ಮಿನಾರಾಯಣ(ಲಚ್ಚಿ), ಜಿ.ಎನ್.ಶ್ಯಾಮಸುಂದರ್, ನಾಗರಾಜ್‌ಶೆಟ್ಟಿ, ಎಸ್.ವಿ.ನಾಗರಾಜ್‌ರಾವ್, ವಿ.ಎನ್.ಗಜೇಂದ್ರ, ಟಿ.ಟಿ.ನರಸಿಂಹಪ್ಪ, ಕೆ.ಎಸ್.ವೇಣುಗೋಪಾಲ. ಲಕ್ಮಣ್, ಹರೀಶ್, ವೈಶಾಕ್, ಶ್ರೀನಿವಾಸ್, ಹೇಮಲತಾ, ಕು.ಮೇಘನಾ, ಪದ್ಮ, ಅನಂತಲಕ್ಷ್ಮಿ ಹಾಜರಿದ್ದರು.
- Advertisement -
- Advertisement -
- Advertisement -