ಮಹಿಳೆಯರು ಸುಶಿಕ್ಷಿತರಾದರೆ ಇಡೀ ಕುಟುಂಬವೇ ಸುಶಿಕ್ಷಿತರಾದಂತೆ ಎಂಬ ಮಾತಿನ ಮುಂದುವರಿಕೆಯಾಗಿ ಮಹಿಳೆಯರು ಆರ್ಥಿಕವಾಗಿ ಸದೃಢರಾದರೆ ಇಡೀ ಕುಟುಂಬವೇ ಆರ್ಥಿಕ ಪ್ರಗತಿಯನ್ನು ಸಾಧಿಸಿದಂತೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಕಾಳಿಕಾಂಭ ಕಮಠೇಶ್ವರಸ್ವಾಮಿ ದೇವಾಲಯದ ವೀರಬ್ರಹ್ಮೇಂದ್ರಸ್ವಾಮಿ ಸಭಾಂಗಣದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸೋಲಾರ್ ದೀಪಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರುತ್ತಿದ್ದ ದಿನಗಳು ಈಗ ದೂರವಾಗಿವೆ. ಅಡುಗೆಯ ಕೆಲಸದೊಂದಿಗೆ ತಮ್ಮ ಕೌಶಲ್ಯದಿಂದ ಆರ್ಥಿಕವಾಗಿ ಪ್ರಗತಿಯನ್ನು ಸಹ ಸಾಧಿಸಬಹುದಾಗಿದೆ. ಈಗಿನ ದಿನಮಾನದಲ್ಲಿ ಮನೆಯ ಓರ್ವ ಸದಸ್ಯ ದುಡಿದು ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರ. ಹಾಗಾಗಿ ಗೃಹಿಣಿಯೂ ಸ್ವಲ್ಪ ಆದಾಯ ಗಳಿಸಿದಲ್ಲಿ ಕುಟುಂಬದ ನಿರ್ವಹಣೆ ಸಲೀಸಾಗುತ್ತದೆ. ವಿವಿಧ ಸ್ವ ಉದ್ಯೋಗಗಳನ್ನು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಭಿಗಳಾಗಬಹುದು ಎಂದು ಹೇಳಿದರು.
ಸೋಲಾರ್ ದೀಪಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಉಳಿತಾಯ ಸಾಧ್ಯವಿದೆ. ವಿದ್ಯುತ್ ಸಮಸ್ಯೆಯಿದ್ದರೂ ದೈನಂದಿನ ಕೆಲಸಕಾರ್ಯಗಳಿಗೆ ಮತ್ತು ಮಕ್ಕಳ ಓದಿಗೆ ತೊಂದರೆಯಾಗದು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸಿಗುತ್ತಿರುವ ತರಬೇತಿ, ಸಾಲ ಮತ್ತು ಅನುಕೂಲಗಳನ್ನು ಪಡೆದು ಆರ್ಥಿಕವಾಗಿ ಬೆಳವಣಿಗೆ ಸಾಧಿಸಬೇಕು. ಇದರ ಮೂಲಕ ತಾಲ್ಲೂಕು ಕೂಡ ಪ್ರಗತಿಯತ್ತ ಸಾಗುತ್ತದೆ ಎಂದು ನುಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪಿ.ರಾಧಾಕೃಷ್ಣರಾವ್ ಮಾತನಾಡಿ, ವಿದ್ಯುತ್ ಸಮಸ್ಯೆಯ ಪರಿಹಾರಕ್ಕಾಗಿ ಈ ದಿನ 150 ಮಹಿಳೆಯರಿಗೆ ಸೋಲಾರ್ ದೀಪಗಳನ್ನು ನೀಡಲಾಗುತ್ತಿದೆ. ಹಣವನ್ನು ಉಳಿಸಿ ಮನೆಯನ್ನು ಬೆಳಗುವುದು ನಮ್ಮ ಉದ್ದೇಶ. ಈಗಾಗಲೇ ತಾಲ್ಲೂಕಿನಲ್ಲಿ 9,308 ಸ್ವಸಹಾಯ ಸಂಘಗಳನ್ನು ರಚಿಸಿದ್ದು, ಒಂದು ಲಕ್ಷಕ್ಕೂ ಮೇಲ್ಪಟ್ಟು ಮಹಿಳೆಯರು ಸದಸ್ಯರಾಗಿದ್ದಾರೆ. ರೈತರಿಗೆ ಕೃಷಿ ವಿಚಾರ ಸಂಕಿರಣ, ಮಹಿಳೆಯರಿಗೆ ಬ್ಯೂಟಿಷಿಯನ್, ಟೈಲರಿಂಗ್ ಮುಂತಾದ ತರಬೇತಿ, ಬ್ಯಾಂಕ್ ಖಾತೆ, ಶಾಲೆಗಳಿಗೆ ಬೆಂಚ್, ಡೆಸ್ಕ್, ವೃದ್ಧರಿಗೆ ಮಾಸಾಶನ ಮುಂತಾದ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸೋಲಾರ್ ದೀಪಗಳನ್ನು ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲ್ಲೂಕು ನಿಯೋಜಕ ಮೋಹನ್, ಜನಾರ್ಧನ್, ಸೆಲ್ಕೋ ಸಂಸ್ಥೆಯ ವಿನೋದ್‌ರಾಜ್, ಜಂಗಮಕೋಟೆ ಒಕ್ಕೂಟದ ಮಂಜುಳ, ನಾಗರತ್ನಮ್ಮ, ಸೇವಾ ಪ್ರತಿನಿಧಿ ಸುಜಾತ ಮತ್ತಿತರರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -