ನಗರದ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ಹಲವೆಡೆ ನಡೆಸಲಾಗುತ್ತದೆ. ಆದರೆ ಗ್ರಾಮೀಣ ಮಕ್ಕಳಿಗೆ ಅದರಲ್ಲೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸುವವರು ಅಪರೂಪ.
ಅಪರೂಪದ ಸಂಗತಿಯೆನ್ನುವಂತೆ ತಾಲ್ಲೂಕಿನ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಪರೀಕ್ಷೆಯು ಮುಗಿಯುತ್ತಿದ್ದಂತೆಯೆ ಎರಡು ದಿನಗಳ ಕಾಲ ಬೇಸಿಗೆ ಶಿಬಿರವನ್ನು ಉಚಿತವಾಗಿ ನಡೆಸಲಾಯಿತು.
ಬೆಂಗಳೂರಿನ ಬ್ಯಾಂಬಿನೋ ಪಬ್ಲಿಕ್ ಶಾಲೆಯ ನಂದಿತಾ ಕ್ಸೇವಿಯರ್ ಮತ್ತು ಸಂಗಡಿಗರು ಮುತ್ತೂರು ಶಾಲೆಯಲ್ಲಿ ಬೇಸಿಗೆಯ ಶಿಬಿರದ ನೆಪದಲ್ಲಿ ಮಕ್ಕಳ ಉತ್ಸವವನ್ನೇ ಆಚರಿಸಿದ್ದಾರೆ. ಹಗ್ಗ ಜಗ್ಗಾಟ, ವೇಗದ ಓಟ, ಅಡೆತಡೆಯ ಓಟ, ಮ್ಯೂಸಿಕಲ್ ಚೇರ್, ರಿಲೇ ಮುಂತಾದ ಕ್ರೀಡೆಗಳನ್ನು ಆಡಿ ದಣಿದ ಮಕ್ಕಳಿಗೆ ಶಕ್ತಿ ತುಂಬಲು ಸಿಹಿ ಮತ್ತು ಖಾರದ ಬನ್ನುಗಳನ್ನು ನೀಡಲಾಯಿತು. ಪೇಪರ್ ಬಳಸಿ ಹಕ್ಕಿ, ಕಿರೀಟ ಮುಂತಾದವುಗಳನ್ನು ತಯಾರಿಸುವುದನ್ನು ಕಲಿಸಲಾಯಿತು. ಚಿತ್ರ ರಚನೆಯ ಬಗ್ಗೆಯೂ ತಿಳಿಸಿಕೊಡಲಾಯಿತು. ಮೀನು, ಏರೋಪ್ಲೇನ್, ಚಿಟ್ಟೆ, ಟ್ರಕ್ಕು, ಟ್ರೇನು, ಹೂವು ಮುಂತಾದವುಗಳನ್ನು ಚಿತ್ರಿಸಿ, ಬಣ್ಣ ತುಂಬಿ, ಚಮಕಿಗಳನ್ನು ಹಾಕುವ ಮೂಲಕ ಅಲಂಕರಿಸಿದ ಮಕ್ಕಳು, ಮೊಲದ ಕಿವಿಗಳನ್ನು ಪೇಪರಿನಲ್ಲಿ ತಯಾರಿಸಿ ಧರಿಸಿ ಸಂಭ್ರಮಿಸಿದರು.
ಸಂಗೀತಾ ಎಂಬುವವರು ಮಕ್ಕಳಿಗೆ ಹಾಡು ಮತ್ತು ನೃತ್ಯವನ್ನು ಕಲಿಸಿದರು. ಕನ್ನಡ, ತೆಲುಗು ಮತ್ತು ಹಿಂದಿ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕುವುದನ್ನು ಅಭ್ಯಾಸ ಮಾಡಿದರು.
ಎರಡು ದಿನಗಳ ಶಿಬಿರ ಕ್ಷಣಗಳಂತೆ ಮುಗಿದು ಹೋದಂತೆ ಮಕ್ಕಳಿಗೆ ಅನಿಸುತ್ತಾ, ಇನ್ನಷ್ಟು ಇದ್ದಿದ್ದರೆ ಚೆನ್ನಾಗಿತ್ತು ಎಂದ ಮಕ್ಕಳಿಗೆ ಚಿತ್ರ ರಚಿಸಲು ಪುಸ್ತಕ, ಬಣ್ಣದ ಪೆನ್ಸಿಲ್ಗಳು, ಲೇಖನ ಸಾಮಗ್ರಿಗಳು, ನೋಟ್ ಪುಸ್ತಕ, ತಿನಿಸುಗಳನ್ನು ನೀಡಿ ರಜೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಯಿತು.
‘ಎರಡು ದಿನಗಳ ಕಾಲ ಮುತ್ತೂರಿನ ಶಾಲಾ ವಿದ್ಯಾರ್ಥಿಗಳೊಂದಿಗೆ ಕಳೆದದ್ದು ಸಾರ್ಥಕವಾಯಿತು. ಮಕ್ಕಳು ನಗುತ್ತಾ, ಆಡುತ್ತಾ, ಸಂತೋಷದಿಂದ ಹಲವಾರು ವಿಷಯಗಳನ್ನು ಕಲಿತರು. ಮಕ್ಕಳೊಂದಿಗೆ ಬೆರೆತು ನಾವೂ ನಮ್ಮ ಬಾಲ್ಯವನ್ನು ಕಂಡೆವು. ‘ನಮ್ಮ ಮುತ್ತೂರು’ ಸಂಸ್ಥೆಯ ಮೂಲಕ ನಮಗೆ ಈ ಅವಕಾಶ ಸಿಕ್ಕಿತು. ಹಲವು ಮಂದಿ ದಾನಿಗಳು ಕೈಜೋಡಿಸಿದ್ದರಿಂದ ಈ ಶಿಬಿರ ಯಶಸ್ವಿಯಾಯಿತು’ ಎಂದು ನಂದಿತಾ ಕ್ಸೇವಿಯರ್ ತಿಳಿಸಿದರು.
- Advertisement -
- Advertisement -
- Advertisement -