27.5 C
Sidlaghatta
Wednesday, July 30, 2025

ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ

- Advertisement -
- Advertisement -

ಯೋಗ ಯಾವುದೇ ಧರ್ಮ, ಪಂಥ ಅಥವಾ ಮತಕ್ಕೆ ಸೀಮಿತವಲ್ಲ. ಅದೊಂದು ಜೀವನ ಪದ್ಧತಿ. ದೇಹ ಮತ್ತು ಮನಸ್ಸು ಆರೋಗ್ಯವಾಗಿರಿಸಿಕೊಳ್ಳಲು ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಯೋಗಾಸನ, ಪ್ರಾಣಾಯಾಮ ಮತ್ತು ಶೋಭಾಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ಶರೀರ, ಬುದ್ಧಿ, ಮನಸ್ಸು ಸಮತೋಲನ ಸಾಧಿಸುವ ಜೀವನ ವಿಧಾನವಾಗಿದೆ. ನಮ್ಮಲ್ಲಿನ ಶಕ್ತಿಯನ್ನು ಕಂಡುಕೊಳ್ಳುವುದೇ ಯೋಗ. ನಿಜಾರ್ಥದಲ್ಲಿ ಯೋಗವೆಂದರೆ ಜೀವನ ಪದ್ಧತಿ. ಒಂದು ಗಂಟೆ ಅಭ್ಯಾಸ ಮಾಡಿ ಇಪ್ಪತ್ಮೂರು ಗಂಟೆ ವ್ಯವಹಾರದಲ್ಲಿ ಯೋಗ ಆಧಾರಿತ ಜೀವನ ನಡೆಸಬೇಕು. ಪರಸ್ಪರ ಹೊಂದಿಕೊಂಡು ಬದುಕುವ ರೀತಿಯನ್ನು ಯೋಗದಿಂದ ಕಲಿಯಬಹುದು. ಪುರಾತನ ಯೋಗ ಪದ್ಧತಿ ನಮ್ಮ ದೇಶದ ಹೆಮ್ಮೆಯಾಗಿದೆ. ದೇಹ ದೇವಾಲಯವಿದ್ದಂತೆ ಅದನ್ನು ಶುದ್ಧಿಯಾಗಿಟ್ಟುಕೊಳ್ಳುವುದೇ ಯೋಗ ಎಂದರು.
ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳನ್ನು ಯೋಗಪಟುಗಳು ಮಾಡಿದರು. ಪ್ರಾಣಾಯಾಮ ಸಹ ಯೋಗಾಸನದ ನಂತರ ಮಾಡಲಾಯಿತು. ಮುಖ್ಯ ರಸ್ತೆಯಲ್ಲಿ ಯೋಗ ಪಟುಗಳಿಂದ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ನಂತರ ಪ್ರಸಾದವನ್ನು ವಿತರಿಸಲಾಯಿತು.
ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿದ್ದರಾಜು, ಸಬ್‌ಇನ್ಸ್‌ಪೆಕ್ಟರ್‌ ಪ್ರದೀಪ್‌ ಪೂಜಾರಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಎಸ್‌.ಶಂಕರ್‌, ಜಿಲ್ಲಾ ಸಂಚಾಲಕ ಸುಂದರಾಚಾರಿ ಹಾಜರಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ
‘ಯೋಗ ಪ್ರತಿಯೊಬ್ಬರನ್ನು ರೋಗ ಮುಕ್ತಿಯತ್ತ ಕೊಂಡೊಯ್ಯುತ್ತದೆ. ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು’ ಎಂದು ಯೋಗ ಶಿಕ್ಷಕ ರಾಮ್ ಮೋಹನ್ ಜೀ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನೆಹರು ಯುವ ಕೇಂದ್ರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನ ಮತ್ತು ನೆರೆ ಹೊರೆಯ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜಕ್ಕೆ ಕೊಡುಗೆಯಾಗಿ ನಾವು ಏನನ್ನಾದರೂ ನೀಡಬೇಕು. ಆ ಮೂಲಕ ಸಮಾಜಿಕ ಸೇವೆಯ ಹೊಣೆಗಾರಿಕೆ ನಿಭಾಯಿಸಬೇಕು. ಸಾತ್ವಿಕ ಆಹಾರ ಸೇವನೆ ಹಾಗೂ ನಿಯಮಿತ ಯೋಗ ಕಲಿಕೆ ಮನುಷ್ಯನ ಆರೋಗ್ಯದಲ್ಲಿ ಪ್ರಗತಿ ಮೂಡಿಸುತ್ತದೆ. ಇಂತಹ ಆರೋಗ್ಯವಾಹಕ ಯೋಗವನ್ನು ಪ್ರತಿನಿತ್ಯ ೧೫ ರಿಂದ ೨೦ ನಿಮಿಷ ಪಾಲಿಸುವುದರೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಯೋಗ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದದ್ದು ಇದೀಗ ಇಡೀ ವಿಶ್ವವೆಲ್ಲಾ ಅದನ್ನೊಪ್ಪಿಕೊಂಡು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತಿದೆ. ಹಾಗಾಗಿ ಯುವಪೀಳಿಗೆ ಮುಂದಿನ ದಿನಗಳಲ್ಲಿ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಯೋಗವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಯೋಗವನ್ನು ಮಾಡುವುದರಿಂದ ದೈಹಿಕವಾಗಿ ಸಮತೋಲನ ಕಾಪಾಡಿಕೊಳ್ಳುವುದರ ಜೊತೆಗೆ, ಮಾನಸಿಕವಾಗಿ ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ, ಕ್ರೀಯಾಶೀಲತೆ, ಹಾಗೂ ದಿನನಿತ್ಯ ಚಟುವಟಿಕೆಯಿಂದ ಇರಲು ಯೋಗ ಸಹಕಾರಿಯಾಗಿರುತ್ತದೆ, ಹಾಗಾಗಿ ವಿದ್ಯಾರ್ಥಿಗಳು ಪ್ರಮುಖವಾಗಿ ಯುವಜನತೆ ತಮ್ಮ ಜೀವನದುದ್ದಕ್ಕೂ ಯೋಗವನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಡಾಸನ, ಅರ್ಧಚಂದ್ರಾಸನ, ಪದ್ಮಾಸನ, ಅರ್ಧಕಟ್ಟಿ ಚಕ್ರಾಸನ, ವೃಕ್ಷಾಸನ, ಸೇರಿದಂತೆ ವಿವಿಧ ಆಸನಗಳ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಗರಸಭೆ ಆಯುಕ್ತ ಚಲಪತಿ, ಪ್ರಾಂಶುಪಾಲ ಎನ್. ಆನಂದ್, ಎನ್.ಎಸ್.ಎಸ್.ಕಾರ್ಯದರ್ಶಿ ಮುನಿರಾಜು, ವಕೀಲ ರವೀಂದ್ರನಾಥ ಹಾಜರಿದ್ದರು.
ಬಿಜೆಪಿ ಕಾರ್ಯಕರ್ತರಿಂದ ಯೋಗ
ನಗರದ ಅರಳೇಪೇಟೆಯ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮಕ್ಕಳೊಂದಿಗೆ ಯೋಗಾಸನ ಮಾಡುವ ಮೂಲಕ ಆಚರಿಸಲಾಯಿತು.
‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ’ ಎಂಬ ಹಿರಿಯ ಮಾತಿನಂತೆ ಎಳೆಯ ವಯಸ್ಸಿನಿಂದಲೇ ನಮ್ಮ ಪರಂಪರೆ, ಯೋಗ ಪದ್ಧತಿ ಮತ್ತು ಸಂಸ್ಕಾರವನ್ನು ಕಲಿಸುವ ನಿಟ್ಟಿನಲ್ಲಿ ಮಕ್ಕಳೊಂದಿಗೆ ಯೋಗಾಸನ ಮಾಡುತ್ತಿದ್ದೇವೆ’ ಎಂದು ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್‌ ತಿಳಿಸಿದರು.
ಬಿಜೆಪಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೆ.ಪುರುಷೋತ್ತಮ, ಕರಾಟೆ ಶಿಕ್ಷಕ ಅರುಣ್‌ಕುಮಾರ್‌ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!