ಈಗಿನ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು. ಇದರಿಂದ ಅವರಲ್ಲಿ ಹೊಸ ಚಿಂತನೆಗಳ ಹುಟ್ಟುವ ಮೂಲಕ ಮುಂದೆ ಅವರು ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕೆ ಪೂರಕರಾಗುತ್ತಾರೆ ಎಂದು ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವ ರಂಗಭೂಮಿ ದಿನ ಮತ್ತು ಮಕ್ಕಳ ಪುಸ್ತಕ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಂಗಭೂಮಿ ಎಂದರೆ ಪ್ರತಿಕ್ಷಣ ಬದುಕುವ, ಕಲಾತ್ಮಕವಾಗಿ ಅಭಿವ್ಯಕ್ತಿಸುವ, ಸೌಂದರ್ಯಪ್ರಜ್ಞೆಯನ್ನು ಮೂಡಿಸುವ ಮಾಧ್ಯಮ. ಕನ್ನಡದ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಾಧ್ಯಮದಲ್ಲಿ ರಂಗಭೂಮಿಯ ಪಾತ್ರ ಬಹಳ ದೊಡ್ಡದು. ಮಕ್ಕಳಿಗೆ ರಂಗಭೂಮಿ ತರಬೇತಿ ನೀಡುವುದರಿಂದ ಅವರ ವ್ಯಕ್ತಿತ್ವವು ಅರಳುತ್ತದೆ. ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ನಾಟಕ, ಅಭಿನಯಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮಾತನಾಡಿ, ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದ ಡ್ಯಾನಿಷ್ ಬರಹಗಾರ ಹ್ಯಾನ್ಸ್ ಕಿಶ್ಚಿಯನ್ ಅಂಡರ್‌ಸನ್‌ನ ಜನ್ಮದಿನವನ್ನು 1962ರಲ್ಲಿ ವಿಶ್ವ ಮಕ್ಕಳ ಪುಸ್ತಕ ದಿನವನ್ನಾಗಿ ಘೋಷಿಸಲಾಯಿತು. ನಮ್ಮ ಶಾಲೆಯ ಗ್ರಂಥಾಲಯದ ಪುಸ್ತಕಗಳನ್ನು ಮಕ್ಕಳು ಓದುವ ಮೂಲಕ ಮಕ್ಕಳ ಪುಸ್ತಕ ದಿನದ ಅರ್ಥ ಹೆಚ್ಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್, ಭಾರತಿ, ಸಿಬ್ಬಂದಿ ವೆಂಕಟಮ್ಮ, ಮಮತಾ, ದೇವರಮಳ್ಳೂರು ರಾಮಣ್ಣ, ಪಾಪಣ್ಣ ಹಾಜರಿದ್ದರು.
- Advertisement -
- Advertisement -
- Advertisement -