ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಐದನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಜಮಾತೆ ಇಸ್ಲಾಮಿ ಹಿಂದ್ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ಸಾಹಬ್ ಮಾತನಾಡಿದರು.
“ಹಿಂಸೆಯ ಬದಲಿಗೆ ಒಂದಾದರೂ ಜೀವವನ್ನು ಉಳಿಸಿದಲ್ಲಿ ಅದು ಮನುಕುಲದ ಬಹುದೊಡ್ಡ ಸೇವೆ” ಎಂದು ಖುರಾನ್ ನಲ್ಲಿ ಹೇಳಿದೆ. ಹಾಗಾಗಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಈದ್ ಮಿಲಾದ್ ಹಬ್ಬ ಅರ್ಥಪೂರ್ಣವಾಗಿದೆ ಎಂದು ಅವರು ತಿಳಿಸಿದರು.
ಜೀವವನ್ನು ಉಳಿಸುವ ರಕ್ತವನ್ನು ವೈದ್ಯಕೀಯ ವಿಜ್ಞಾನ ಗ್ರೂಪ್ ಗಳಾಗಿ ನೋಡುತ್ತದೆ ಜಾತಿ ಅಥವಾ ಧರ್ಮಗಳಿಂದಲ್ಲ. ಎಲ್ಲರ ದೇಹದಲ್ಲಿರುವುದೂ ಕೆಂಪು ಬಣ್ಣದ ರಕ್ತವೇ. ಸಾಮರಸ್ಯದ ಬದುಕು ಸಮಾಜವನ್ನು ಸ್ವಾಸ್ಥ್ಯವಾಗಿಡುತ್ತದೆ. ಹೃದಯ ವೈಶಾಲ್ಯದಿಂದ ಧರ್ಮ, ರಾಜಕೀಯ ಹಾಗೂ ಜಾತಿ ಬೇಧಗಳು ಒಡಕನ್ನು ತರದಂತೆ ವಿವೇಕದಿಂದ ನಾವು ಬದುಕಬೇಕು. ಸಮಾಜದ ಕುರಿತಾಗಿ ಕಳಕಳಿಯಿಂದ ಯುವಕರು ಒಗ್ಗೂಡಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಮಹಮ್ಮದ್ ಪೈಗಂಬರ್ ಜನ್ಮದಿನವನ್ನು ಸಾರ್ಥಕಗೊಳಿಸಿರುವಿರಿ ಎಂದು ಅಭಿನಂದಿಸಿದರು.
ಯೂನಿಟಿ ಸಿಲ್‌ಸಿಲಾ ಫೌಂಡೇಷನ್ ಗೌರವಾಧ್ಯಕ್ಷ ಮೊಹಮದ್ ಖಾಸಿಂ ಮಾತನಾಡಿ, ಜಾತಿ, ಮತ, ಧರ್ಮಗಳನ್ನು ಮೀರಿ ರಕ್ತದಾನ ಮಾಡುವುದರಿಂದ ಅನೇಕ ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಹಕಾರಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರ ಮೆದುಳು, ಹೃದಯ, ಹಾಗೂ ಎಲ್ಲಾ ಅಂಗಾಂಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಈ ಬಾರಿ ರಕ್ತದಾನ ಶಿಬಿರದೊಡನೆ ರಕ್ತದಾನದ ಕುರಿತು ಜನಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ. ಗುರುರಾಜರಾವ್, ನಗರಸಭೆ ಆಯುಕ್ತ ಚಲಪತಿ, ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸದ್, ಕಾರ್ಯದರ್ಶಿ ಇಮ್ತಿಯಾಜ್ ಪಾಷ, ಅಕ್ರಂಪಾಷ, ಮುದಸಿರ್‌ಪಾಷ, ರಹಮತ್‌ಪಾಷ, ಜಬೀವುಲ್ಲ, ಅಮೀರ್‌ಪಾಷ, ಜಹೀರ್‌ಪಾಷ, ಮೊಹಮ್ಮದ್‌ಫಾರುಕ್, ಸಯ್ಯದ್ ತೌಫೀಕ್, ಶಬ್ಬೀರ್‌ಪಾಷ, ಶಂಷೀರ್ ಪಾಷ, ಗೌಸ್‌ಖಾನ್, ಟಿ.ಟಿ.ನರಸಿಂಹಪ್ಪ, ಸಮತಾ ಸೈನಿಕ ದಳದ ಶ್ರೀರಾಮ್ ಹಾಜರಿದ್ದರು.
- Advertisement -
- Advertisement -
- Advertisement -