ಹಳ್ಳಿಯನ್ನು ಹಸಿರಾಗಿರಿಸಲು ಯುವಕರ ದಿಟ್ಟ ಪ್ರಯತ್ನ

- Advertisement -
- Advertisement -

ಹಳ್ಳಿಗಳು ಅಭಿವೃದ್ಧಿಯಾಗಬೇಕು ಎಂದು ಮಾತು ಹಲವೆಡೆ ಕೇಳಿಬರುವುದು ಸಹಜ. ಆದರೆ ಭಾಷಣ ಮಾಡುವವರು ಯಾರೂ ಅಬಿವೃದ್ಧಿ ಮಾಡರು. ನಮ್ಮ ಅಭಿವೃದ್ಧಿ ನಾವೇ ಮಾಡಿಕೊಳ್ಳಬೇಕೆಂದು ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಯುವಕರು ಠೊಂಕಕಟ್ಟಿ ನಿಂತಿದ್ದಾರೆ. ಅವರಿಗೆ ಹಿರಿಯರು ಬೆಂಬಲ ನೀಡುತ್ತಿದ್ದಾರೆ.
ಹಸಿರು ಪ್ರೇಮದಿಂದ ಬೆರಳೆಣಿಕೆಯಷ್ಟು ಯುವಕರು ಒಗ್ಗೂಡಿ ಕಳೆದ ವರ್ಷ ತಾವೇ ಕೈಯಾರೆ ಹಣ ಖರ್ಚು ಮಾಡಿ ಸುಮಾರು ಇನ್ನೂರು ಗಿಡಗಳನ್ನು ನೆಟ್ಟರು. ಹಳ್ಳಿಯ ಸ್ಮಶಾನದ ಸುತ್ತ, ಸ್ಮಶಾನದಿಂದ ಮುಖ್ಯ ರಸ್ತೆಯವರೆಗೂ ದಾರಿ ಬದಿ ಹಾಗೂ ಮುಖ್ಯ ರಸ್ತೆಯಿಂದ ಸರ್ಕಾರಿ ಶಾಲೆಯವರೆಗೂ ದಾರಿ ಬದಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು.
ಗಿಡಗಳನ್ನು ನೆಟ್ಟ ಯುವಕರು ನಂತರ ಟ್ಯಾಂಕರ್‌ಗಳಲ್ಲಿ ನೀರು ಹಾಕುತ್ತಾ ವರ್ಷ ಪೂರಾ ಗಿಡಗಳನ್ನು ಆರೈಕೆ ಮಾಡಿ ಬೆಳೆಸಿದರು. ಅವರ ಆರೈಕೆಯು ಹೇಗಿತ್ತೆಂದರೆ ಸುಮಾರು ಇನ್ನೂರು ಗಿಡಗಳಲ್ಲಿ ಎಂಟರಿಂದ ಹತ್ತು ಬಿಟ್ಟು ಮಿಕ್ಕೆಲ್ಲಾ ಗಿಡಗಳು ನಳನಳಿಸುತ್ತಿದೆ.
ಅವರ ಇಚ್ಛಾಶಕ್ತಿಗೆ ಮಾರು ಹೋದ ಇತರ ಗ್ರಾಮಸ್ಥರು ಪ್ರೋತ್ಸಾಹಿಸಿ ಬೆಂಬಲಿಸಿದರು. ಈ ವರ್ಷವೂ ಸಸ್ಯಯಜ್ಞ ಪ್ರಾರಂಭಿಸಿರುವ ಯುವಕರು 200 ಗಿಡಗಳನ್ನು ನೆಟ್ಟಿದ್ದಾರೆ. ಅಷ್ಟೇ ಅಲ್ಲದೆ ಸ್ಮಶಾನದಿಂದ ಕೆರೆಯವರೆಗಿನ ದಾರಿ ಬದಿಯಲ್ಲಿ ಬೆಳೆದಿದ್ದ ಕಳ್ಳಿ ಹಾಗೂ ಜಾಲಿಗಿಡಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿ ದಾರಿ ಬದಿಯೆಲ್ಲಾ ಗಿಡಗಳನ್ನು ನೆಟ್ಟಿದ್ದಾರೆ. ಗ್ರಾಮದ ರಸ್ತೆಗಳ ಬದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಿರುವ ಇವರು ಸರ್ಕಾರಿ ಶಾಲೆಯ ಹಿಂಬದಿಯಲ್ಲಿರುವ ವೀರಗಲ್ಲುಗಳ ಸಮೀಪ ಬೆಳೆದಿದ್ದ ಕಳ್ಳಿಗಿಡಗಳನ್ನೆಲ್ಲಾ ತೆರವುಗೊಳಿಸಿ ಈಗ ಅದನ್ನು ಸಂರಕ್ಷಿಸುವ ಉದ್ದೇಶದಲ್ಲಿದ್ದಾರೆ.
‘ನಮ್ಮ ಹಳ್ಳಿಯ ಸ್ಮಶಾನವನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡಲಾಯಿತು. ಕಾಂಪೋಂಡ್‌ ನಿರ್ಮಾಣ, ನೀರಿನ ತೊಟ್ಟಿ ಮತ್ತು ಬರುವ ಜನರಿಗೆ ನೆರಳಿಗಾಗಿ ಶೆಡ್‌ ಕಟ್ಟಿಸಲಾಗಿತ್ತು. ನಾವುಗಳು ಸೇರಿಕೊಂಡು ಅದು ತಗ್ಗಿನಲ್ಲಿರುವುದರಿಂದ ಮಳೆ ನೀರು ಬಂದು ಸೇರುವಂತಹ ಕಲ್ಯಾಣಿಯೊಂದನ್ನು ಸಿಮೆಂಟ್‌ ಬಳಸಿ ನಿರ್ಮಿಸಿದೆವು. ಹೂವು ಹಣ್ಣು ಸೇರಿದಂತೆ ಸುಮಾರು 70 ಜಾತಿಯ ಗಿಡಗಳನ್ನು ಅಲ್ಲಿ ನಾವು ನೆಟ್ಟಿದ್ದೇವೆ. ಗಿಡಗಳಿಗೆ ಪಾತಿಯಂತೆ ಟೈರ್‌ಗಳನ್ನು ಹಾಕಿ ನೀರು ಹರಿದು ಹೋಗದಂತೆ ಮಾಡಿಟ್ಟಿದ್ದೇವೆ. ನಾವು ನಿರ್ಮಿಸಿರುವ ಕಲ್ಯಾಣಿಯಲ್ಲಿ ಬೇಸಿಗೆಯಲ್ಲೂ ಸಹ ನೀರಿರುತ್ತದೆ. ಬೆಳಗಿನ ಜಾವದಲ್ಲಿ ಮೊಲಗಳು ಹಾಗೂ ಜಿಂಕೆಗಳು ನೀರು ಕುಡಿಯಲು ಬರುತ್ತವೆ. ಗ್ರಾಮದ ಆಸುಪಾಸಿನಲ್ಲಿ ಎರಡು ವರ್ಷಗಳಿಂದ 400 ಗಿಡಗಳನ್ನು ನಿಟ್ಟಿದ್ದೇವೆ. ಯುವಕರು ಕೈಜೋಡಿಸಿದರೆ, ಹಿರಿಯರು ಸಹಕಾರ ನೀಡುತ್ತಾರೆ. ವರ್ಷಪೂರಾ ಗಿಡಗಳನ್ನು ಕಾಪಾಡುತ್ತೇವೆ. ಇನ್ನಷ್ಟು ಅಭಿವೃದ್ಧಿ ಯೋಜನೆಗಳು ನಮ್ಮ ಮನಸ್ಸಿನಲ್ಲಿದೆ’ ಎನ್ನುತ್ತಾರೆ ಹಿತ್ತಲಹಳ್ಳಿ ಎಚ್‌.ಎಂ.ಮುನಿರಾಜು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!