
Ganganahalli, Sidlaghatta : ಜನರು ಸಾಕ್ಷರರಾದರೆ, ಸ್ವಾವಲಂಬನೆಯ ಜೀವನ ನಡೆಸಲು ಸಾಧ್ಯವಾಗುವುದರ ಜೊತೆಗೆ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶೀಲಾ ಹೇಳಿದರು.
ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಆಯೋಜಿಸಿದ್ದ 2025 ನೇ ಸಾಲಿನ ಲಿಂಕ್ ಡಾಕ್ಯೂಮೆಂಟ್ ಸಾಕ್ಷರತಾ ಪರೀಕ್ಷೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಶಿಕ್ಷಣವೆಂಬ ಅಸ್ತ್ರವು ಎಲ್ಲಾ ಸಮಸ್ಯೆಗಳಿಗೆ ಆಯುಧವಾಗಿ ಕೆಲಸ ಮಾಡುತ್ತದೆ. ಸರ್ಕಾರದ ಎಲ್ಲಾ ಯೋಜನೆಗಳು, ನೇರವಾಗಿ ಬ್ಯಾಂಕುಗಳ ಮೂಲಕ ಅರ್ಹಫಲಾನುಭವಿಗಳಿಗೆ ಕೊಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಕೊಡುವ ಪಿಂಚಣಿಯೂ ಅವರವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುವುದರಿಂದ, ಬಹಳಷ್ಟು ಮಂದಿಗೆ ಸಹಿ ಮಾಡಲು ಬಾರದ ಕಾರಣ, ಬ್ಯಾಂಕುಗಳಲ್ಲಿ ಚೆಕ್ ಪುಸ್ತಕವೂ ಸಿಗುವುದಿಲ್ಲ. ಇದರಿಂದ ಬಹಳಷ್ಟು ಮಂದಿ ಹಿರಿಯ ನಾಗರಿಕರ ಪಿಂಚಣಿ ಹಣವೂ ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ. ಹೆಬ್ಬೆಟ್ಟನ್ನು ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆಯೂ ಜಾಸ್ತಿಯಾಗಿದ್ದು, ಸರ್ಕಾರದಿಂದ ಸಿಗುವಂತಹ ಇಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಅಕ್ಷರ ಕಲಿತುಕೊಳ್ಳಬೇಕು. ಬ್ಯಾಂಕುಗಳಲ್ಲಿ ನೇರವಾಗಿ ವ್ಯವಹರಿಸುವಂತಹವರಾಗಬೇಕು ಎಂದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಗಾಯಿತ್ರಿ ಮಾತನಾಡಿ, ಹಿರಿಯರು, ಸಾಕ್ಷರತಾ ಕಾರ್ಯಕ್ರಮದ ಬೋಧಕರು ಹೇಳಿಕೊಡುವುದರ ಜೊತೆಗೆ, ತಮ್ಮ ಮನೆಗಳಲ್ಲಿರುವ ಮಕ್ಕಳಿಂದಲೂ ಅಕ್ಷರಾಭ್ಯಾಸ ಮಾಡಿಕೊಂಡರೆ, ಮತ್ತಷ್ಟು ವೇಗವಾಗಿ ಕಲಿಯುವುದಕ್ಕೆ ಅವಕಾಶವಾಗುತ್ತದೆ ಎಂದರು.
ಸಾಕ್ಷರತಾ ಬೋಧಕಿ ಸರೋಜ.ಎಸ್.ಎಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಗಾಯಿತ್ರಿ, ಉಪಾಧ್ಯಕ್ಷ ಮುನಿರಾಜು, ನರೇಗಾ ಯೋಜನೆಯ ಕಾಯಕಮಿತ್ರ ಎಸ್.ರೇಣುಕಮ್ಮ, ಜಲಗಾರ ಜಿ.ಟಿ.ಶಿವಕುಮಾರ್, ಹಾಗೂ ಕಲಿಕಾರ್ಥಿಗಳು ಹಾಜರಿದ್ದರು.