
Sidlaghatta : ಕ್ರೀಡೆಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸದೃಢತೆ, ನಾಯಕತ್ವದ ಗುಣ ಹಾಗೂ ಶಿಸ್ತು ಬೆಳೆಸಲು ಸಹಕಾರಿಯಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಗಳನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲೆ ವಿಜಯಶ್ರೀ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಕೂಟಗಳು ಕಲಿಕೆಯ ಅವಿಭಾಜ್ಯ ಭಾಗವಾಗಿದ್ದು, ಒತ್ತಡದ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಹಾಗೂ ಮಾನಸಿಕವಾಗಿ ಹೇಗೆ ಸದೃಢವಾಗಿರಬೇಕು ಎಂಬುದನ್ನು ಕ್ರೀಡೆಗಳು ಕಲಿಸುತ್ತವೆ. ಪಠ್ಯಚಟುವಟಿಕೆಗಳಲ್ಲಿ ಹಿಂದುಳಿದಿದ್ದರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿ ಉತ್ತಮ ಸಾಧನೆ ಮಾಡಿದ ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.
ಸಾಧನೆಗೆ ನಿರ್ದಿಷ್ಟ ಕ್ಷೇತ್ರ ಎಂಬುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು. ಅದಕ್ಕಾಗಿ ಶಿಸ್ತು, ಸಂಯಮ, ಏಕಾಗ್ರತೆ ಮತ್ತು ಗುರಿ ತಲುಪುವ ಛಲ ಅಗತ್ಯ. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಒಂದು ಸೋಲು ನೂರಾರು ಗೆಲುವುಗಳಿಗೆ ದಾರಿಯಾಗಬಹುದು. ಆದ್ದರಿಂದ ಸೋತ ಮಾತ್ರಕ್ಕೆ ನಿರುತ್ಸಾಹಗೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕ್ರೀಡಾಕೂಟದಲ್ಲಿ ಕಬ್ಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್, ಗುಂಡು ಎಸೆತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.
ಉಪಪ್ರಾಂಶುಪಾಲ ಮುರಳೀಧರ್, ಶಿಕ್ಷಕರಾದ ಪ್ರಸಾದ್ ಎಸ್.ಎ., ಸಹನ ಟಿ., ಶಶಿದೀಪಿಕಾ ಜಿ., ನರೇಶ್ ಜಿ.ಎನ್., ಸಹನಾ ಎ., ರಾಮಪ್ಪ, ಸಿದ್ಧಪ್ಪ ಶಿವರಾಯಿ, ತ್ರಿವೇಣಿ ಕೆ.ಪಿ., ಶ್ರೀಲಕ್ಷ್ಮೀ, ಯಲ್ಲಪ್ಪ ಗದ್ದಿನಕೇರಿ, ಸಿದ್ಧು ಹುಣಸೀಕಟ್ಟಿ ಹಾಗೂ ಸುಂಡ್ರಹಳ್ಳಿಯ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ್ ಹಾಜರಿದ್ದರು.
In English: Indira Gandhi residential school principal Vijayashree inaugurated the school’s annual sports day at Appegowdanahalli in Sidlaghatta taluk, urging students to treat wins and losses equally and pursue excellence with discipline. Events included kabaddi, kho-kho, volleyball and throwball.