
Sidlaghatta : “ಸಮಾಜದ ಹಿಂದುಳಿದ ವರ್ಗಗಳು, ದಲಿತರು ಹಾಗೂ ಬಡವರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕಾದರೆ ಸಂಘಟಿತ ಹೋರಾಟ ಅತ್ಯಗತ್ಯ,” ಎಂದು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಕೆ.ಎಂ. ಸಂದೇಶ್ ತಿಳಿಸಿದರು.
ತಾಲ್ಲೂಕಿನ ಲಕ್ಕಹಳ್ಳಿ ಮತ್ತು ಪೈಲಹಳ್ಳಿ ಗ್ರಾಮಗಳಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ನೂತನ ಗ್ರಾಮ ಶಾಖೆಗಳನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“ದೇಶದಲ್ಲಿ ಸಾಮಾನ್ಯ ಜನರಿಗೆ ಹಕ್ಕುಗಳು ಸುಲಭವಾಗಿ ಸಿಗುವುದಿಲ್ಲ, ಹೋರಾಟ ಮಾಡಿದರೆ ಮಾತ್ರ ನ್ಯಾಯ ಸಿಗುತ್ತದೆ. ಇಂದಿಗೂ ಅನೇಕ ಬಡ ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿವೆ. ಇಂತಹವರಿಗೆ ಮನೆ, ನಿವೇಶನ, ಸಾಲ ಸೌಲಭ್ಯಗಳನ್ನು ದೊರಕಿಸಿಕೊಡುವ ಕೆಲಸವನ್ನು ನಮ್ಮ ಸಮಿತಿ ಆದ್ಯತೆಯ ಮೇರೆಗೆ ಮಾಡಲಿದೆ. ಸರ್ಕಾರಿ ಜಮೀನುಗಳಲ್ಲಿ ಬಡವರಿಗೆ ನಿವೇಶನಗಳನ್ನು ಕೊಡಿಸುವ ನಿಟ್ಟಿನಲ್ಲಿ ಕಾನೂನುಬದ್ಧ ಹೋರಾಟ ನಡೆಸುತ್ತೇವೆ,” ಎಂದು ಭರವಸೆ ನೀಡಿದರು.
ದೌರ್ಜನ್ಯದ ವಿರುದ್ಧ ಎಚ್ಚರಿಕೆ:
ಹಿಂದುಳಿದ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಸಂಘಟನೆ ಮೌನವಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಡಾ. ಸಂದೇಶ್, “ಅನ್ಯಾಯದ ವಿರುದ್ಧ ಹೋರಾಡುವಾಗ ಬೆದರಿಕೆ, ಸುಳ್ಳು ಪ್ರಕರಣಗಳು ಬರುವುದು ಸಹಜ. ಆದರೆ, ಸತ್ಯದ ಪರವಾಗಿ ನಿಂತರೆ ಅಂತಿಮವಾಗಿ ಬಡವರದೇ ಗೆಲುವಾಗುತ್ತದೆ,” ಎಂದರು. ಜೂನ್ 1ರಂದು ವಿಜಯಪುರದಲ್ಲಿ ನಡೆಯಲಿರುವ ಬೃಹತ್ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಈ ಸಂದರ್ಭದಲ್ಲಿ ಲಕ್ಕಹಳ್ಳಿ ಗ್ರಾಮ ಶಾಖೆಯ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಗೌರವಾಧ್ಯಕ್ಷರಾಗಿ ದಾಸಪ್ಪ, ಅಧ್ಯಕ್ಷರಾಗಿ ಆಂಜಿನಪ್ಪ, ಉಪಾಧ್ಯಕ್ಷರಾಗಿ ಸುಬ್ಬರಾಯಪ್ಪ, ಜಂಟಿ ಕಾರ್ಯದರ್ಶಿಯಾಗಿ ರಾಜಪ್ಪ, ಖಜಾಂಚಿಯಾಗಿ ಆಂಜಿನಪ್ಪ ಹಾಗೂ ಸದಸ್ಯರಾಗಿ ಆನಂದ್, ರಾಮಾಂಜಿ, ಕಲ್ಯಾಣ್ ಕುಮಾರ್, ಸುಬ್ರಮಣಿ, ನರಸಿಂಹಮೂರ್ತಿ, ವೆಂಕಟೇಶ್ ಎಲ್. ಮತ್ತು ಮುನಿಪಾಪಣ್ಣ ಕೆ. ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಕಾನೂನು ಸಲಹೆಗಾರ ಹರೀಶ್ ಎಂ.ವಿ., ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್, ಜಿಲ್ಲಾಧ್ಯಕ್ಷ ನಾಗರಾಜ್, ತಾಲೂಕು ಅಧ್ಯಕ್ಷೆ ಶಶಿಕಲಾ ನರಸಿಂಹರಾಜು, ಶಶಿಕುಮಾರ್, ರವಿ, ಶಿವರಾಜ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.