ಕಾನೂನು ಸೇವಾ ಸಮಿತಿ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ

ಚಳಿಗಾಲ ಪ್ರಾರಂಭವಾಗುತ್ತಿದ್ದು ಕೊರೊನಾ ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಮಂಜುನಾಥ್ ತಿಳಿಸಿದರು.

 ನಗರದ ಬಸ್ ನಿಲ್ದಾಣದ ಬಳಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೋವಿಡ್-19 ಪ್ರಚಾರ ಆಂದೋಲನದ ಅಂಗವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

 ಇತ್ತೀಚೆಗೆ ಕೊರೊನಾ ಮಹಾಮಾರಿ ಕಡಿಮೆಯಾಗಿದೆ ಎಂಬ ನಿರ್ಲಕ್ಷ್ಯದಿಂದ ಜನರು ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಗುಂಪುಗುಂಪಾಗಿ ಸೇರುವುದು ಹೆಚ್ಚುತ್ತಿದೆ. ಚಳಿಗಾಲದ ದಿನಗಳಲ್ಲಿ ಕೊರೊನಾ ಮಹಾ ಮಾರಿ ಹೆಚ್ಚಾಗುವ ಬಗ್ಗೆ ವರದಿಗಳು ಬಂದಿವೆ. ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಾಪಾರಿಗಳು ತಮ್ಮ ಅಂಗಡಿಗೆ ಬರುವ ಗ್ರಾಹಕ ಮಾಸ್ಕ್ ಧರಿಸಿದ್ದರೆ ಮಾತ್ರ ವಸ್ತುಗಳನ್ನು ಕೊಡಿ ಇಲ್ಲವಾದಲ್ಲಿ ಯಾವುದೇ ವಸ್ತು ನೀಡಬಾರದು. ಅಂಗಡಿಗಳ ಮುಂಭಾಗ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಪಾಡಬೇಕು. ಮಾಸ್ಕ್ ಧರಿಸದೇ ಓಡಾಡುವವರು ಹಾಗೂ ಅಂಗಡಿಗಳ ಮುಂಭಾಗ ಗುಂಪು ಗುಂಪಾಗಿ ಸೇರಿದರೆ ಹೆಚ್ಚಿನ ದಂಡ ವಿಧಿಸುವ ಜೊತೆಗೆ ನಿಮ್ಮ ಮೇಲೆ ಅಗತ್ಯ ಕ್ರಮ ಜರುಗಿಸಲು ಮುಂದಾಗಬೇಕಾಗುತ್ತದೆ ಎಂದರು.

 ಇದೇ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ಓಡಾಡುವ ಕೆಲವರಿಗೆ ಮಾಸ್ಕ್ ವಿತರಿಸುವ ಜೊತೆಗೆ ಅಂಗಡಿಗಳವರಿಗೆ ಬ್ಯಾನರ್ ವಿತರಿಸಲಾಯಿತು.

 ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ ಪಚ್ಚಾಪುರೆ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಕೋವಿಡ್ ನೋಡಲ್ ಅಧಿಕಾರಿ ಶಿವಕುಮಾರ್, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ನಗರಠಾಣೆ ಪಿಎಸ್ಸೈ ಸತೀಶ್, ಆರೋಗ್ಯ ನಿರೀಕ್ಷಕಿ ಶೋಭ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!