
Melur, Sidlaghatta : ವಿರೋಧ ಪಕ್ಷದ ಶಾಸಕ ಪ್ರತಿನಿಧಿಸುವ ಶಿಡ್ಲಘಟ್ಟ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿ ₹680 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಮತ್ತು ಉದ್ಘಾಟನೆ ಮಾಡುತ್ತಿರುವುದು ಕ್ಷೇತ್ರದ ಇತಿಹಾಸದಲ್ಲಿ ವಿಶೇಷ ದಾಖಲೆಯಾಗಲಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದ್ದಾರೆ.
ಮೇಲೂರು ಗ್ರಾಮದ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಕಾರ್ಯಕ್ರಮ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲು. ನಾವು ಪಕ್ಷಾತೀತವಾಗಿ ಸಿಎಂ, ಡಿಸಿಎಂ, ಸಚಿವರು ಹಾಗೂ ಅಧಿಕಾರಿಗಳನ್ನು ಸ್ವಾಗತಿಸಿ, ಜನರ ಅಗತ್ಯಗಳನ್ನು ಕುರಿತು ಅವರಿಗೆ ಮನವಿ ಸಲ್ಲಿಸುತ್ತೆವೆ,” ಎಂದು ಹೇಳಿದರು.
ಪ್ರಮುಖ ಕಾಮಗಾರಿಗಳಿಗೆ ಚಾಲನೆ
- ₹200 ಕೋಟಿ ಮೌಲ್ಯದ ಹೊಸ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ
- ಅಮರಾವತಿ ಬಳಿಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2ನೇ ಹಂತದ ಕಾಮಗಾರಿ
- ಸಾದಲಿ ರಾಮಸಮುದ್ರ ಕೆರೆಯಿಂದ 12,800 ಮನೆಗಳಿಗೆ ಕುಡಿಯುವ ನೀರಿನ ಯೋಜನೆ
- ನಗರದ ಒಳಚರಂಡಿ ಕಾಮಗಾರಿಯ 2ನೇ ಹಂತ
- ಎಚ್.ಎನ್. ವ್ಯಾಲಿ ಯೋಜನೆಯ ಮೂರನೇ ಹಂತದಲ್ಲಿ 48 ಕೆರೆಗಳಿಗೆ ನೀರು ಹರಿಸುವ ಯೋಜನೆ
- ಸಾದಲಿ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ
- ತಾಲ್ಲೂಕಿನ ಹಲವು ಪ್ರಮುಖ ರಸ್ತೆಗಳ ಡಾಂಬರೀಕರಣ ಮತ್ತು ಸುಧಾರಣೆ
ಒಟ್ಟಾರೆ ಶಿಡ್ಲಘಟ್ಟ ತಾಲ್ಲೂಕಿಗೆ ₹680 ಕೋಟಿ, ಹಾಗೂ ಜಿಲ್ಲಾದ್ಯಂತ ₹1,800 ಕೋಟಿ ರೂ.ಗಳ ಅಭಿವೃದ್ದಿ ಕಾಮಗಾರಿಗಳನ್ನು ಸಿಎಂ ಶುರುಮಾಡಲಿದ್ದಾರೆ.
ಸಿಎಂ ಹೆಲಿಕಾಪ್ಟರ್ ಆಗಮನ – ಸಿದ್ಧತೆ ಜೋರು
ಮುಖ್ಯಮಂತ್ರಿ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ಹೆಲಿಪ್ಯಾಡ್, ಭದ್ರತೆ ಮತ್ತು ವಾಹನ ನಿಲುಗಡೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ಸುಮಾರು 50,000 ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಊಟ, ಆಸನ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದ ದಿಬ್ಬೂರಹಳ್ಳಿ ಮಾರ್ಗಕ್ಕೆ ಡಾಂಬರೀಕರಣ ಅಗತ್ಯ ಎಂದು ಮನವಿ ಮಾಡಿದಾಗ, ಜಿಲ್ಲಾ ಉಸ್ತುವಾರಿ ಮಂತ್ರಿ ಡಾ. ಎಂ.ಸಿ. ಸುಧಾಕರ್ ತಕ್ಷಣವೇ ₹2 ಕೋಟಿ ಬಿಡುಗಡೆ ಮಾಡಿದ್ದು, ಕೆಲಸ ವೇಗವಾಗಿ ಸಾಗುತ್ತಿದೆ ಎಂದು ಶಾಸಕ ರವಿಕುಮಾರ್ ತಿಳಿಸಿದರು.
ಪಕ್ಷಾತೀತವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ
“ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರನ್ನು ಆಹ್ವಾನಿಸಲಾಗಿದೆ, ಸಿಎಂ, ಡಿಸಿಎಂ ಮತ್ತು ಸಚಿವರು ಭಾಗವಹಿಸುತ್ತಿರುವುದು ನಮ್ಮ ಕ್ಷೇತ್ರದ ಗೌರವ.
ಎಲ್ಲರೂ ಪಕ್ಷಾತೀತವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು” ಎಂದು ಶಾಸಕ ಹೇಳಿದರು.
ಕ್ಷೇತ್ರದ ಮುಂದಿನ ಅಭಿವೃದ್ಧಿಗಾಗಿ ವಿಶೇಷ ಅನುದಾನವನ್ನು ಕೇಳುವ ಬಗ್ಗೆ ಅವರು ತಿಳಿಸಿದರು.
ಸಭೆಯಲ್ಲಿ ಸದಸ್ಯ ಮೇಲೂರು ಮಂಜುನಾಥ್, ನಂಜಪ್ಪ, ಎನ್.ಎಸ್. ವೆಂಕಟೇಶ್, ನರಸಿಂಹಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.