Home News ನಕಲಿ ಸಹಿ ಬಳಸಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣವನ್ನು ದೋಚಿದ್ದೆ ಕಾಂಗ್ರೆಸ್‌ನ ಸಾಧನೆ

ನಕಲಿ ಸಹಿ ಬಳಸಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣವನ್ನು ದೋಚಿದ್ದೆ ಕಾಂಗ್ರೆಸ್‌ನ ಸಾಧನೆ

0

Melur, Sidlaghatta : ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಕಲಿ ಸಹಿ ಬಳಸಿ ಅಭಿವೃದ್ದಿಗೆ ಮೀಸಲಾದ ಹಣವನ್ನು ದೋಚಿದ್ದೆ ರಾಜ್ಯ ಕಾಂಗ್ರೆಸ್‌ನ ಸಾಧನೆ, ಕಾಂಗ್ರೆಸ್ ಪಕ್ಷವು ಜನರು ಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರು ಕಾಂಗ್ರೆಸ್ ಪಕ್ಷದ ವಿರುದ್ದ ದೂರಿದರು.

ತಾಲ್ಲೂಕಿನ ಮೇಲೂರು ಗ್ರಾಮದ ತಮ್ಮ ನಿವಾಸದ ಗೃಹ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ದಿಗೆ ಮೀಸಲಾದ ಹಣವನ್ನು ದುರುಪಯೋಗಪಡಿಸಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಮಲ ಕೆಸರಲ್ಲಿ ಇರಬೇಕು, ತೆನೆ ಹೊಲದಲ್ಲಿರಬೇಕು, ಕೈ ಅಧಿಕಾರದಲ್ಲಿರಬೇಕು ಎಂದು ವ್ಯಂಗ್ಯವಾಗಿ ಹೇಳುತ್ತಿದ್ದರು. ಅಧಿಕಾರದಲ್ಲಿರುವ ಕೈ ಜನರಿಗೆ ಸಹಾಯ ಮಾಡಬೇಕೆ ಹೊರತು ಅಭಿವೃದ್ದಿ ಹಣವನ್ನು ಹೊಡೆಯಲು ನಕಲಿ ಸಹಿ ಹಾಕುವುದಕ್ಕಲ್ಲ ಎಂದು ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷ ಎಲ್ಲಿದೆ ಎಂದಿದ್ದರು. ಅದಕ್ಕೆ ಕೋಲಾರ, ಮಂಡ್ಯದಲ್ಲಿ ಗೆದ್ದು ಇಲ್ಲಿದೆ ಜೆಡಿಎಸ್ ಎಂದು ನಾವು ತೋರಿಸಿದ್ದೇವೆ ಎಂದು ಹೇಳಿದರು.

ಅಧಿಕಾರದಲ್ಲಿದ್ದಾಗ ತಗ್ಗಿ ಬಗ್ಗಿ ನಡೆಯಬೇಕು, ಜನರ ಕಷ್ಟ ಸುಖ ಕೇಳಿ ನೆರವಾಗಬೇಕು. ಇಲ್ಲವಾದಲ್ಲಿ ಡಿಕೆ ಶಿವಕುಮಾರ್ ತಮ್ಮ ಡಿ.ಕೆ.ಸುರೇಶ್, ಸಿಎಂ ಸಿದ್ದರಾಮಯ್ಯ ತವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಂತೆ ಸೋಲಬೇಕಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಮತ್ತು ಜಡಿಎಸ್ ಮೈತ್ರಿ ಅಭ್ಯರ್ಥಿಗಳಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗದಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದಿದ್ದು ಇವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಯಲು ಸೀಮೆಯ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ.

ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರು ಮಾತುಕೊಟ್ಟಂತೆ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿ ಮಾಡುವ ಮೂಲಕ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಅದುವೆ ನಾವು ಮತದಾರರಿಗೆ, ಕಾರ್ಯಕರ್ತರಿಗೆ ಕೊಡುವ ಗೌರವ ಎಂದ ಅವರು, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲುವಿಗೆ ಶ್ರಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಜೆಡಿಎಸ್ ಮುಖಂಡರಾದ ಬಂಕ್ ಮುನಿಯಪ್ಪ, ತಾದೂರು ರಘು, ಡಿ.ಬಿ.ವೆಂಕಟೇಶ್, ಹುಜಗೂರು ರಾಮಯ್ಯ, ಮೇಲೂರು ಮಂಜುನಾಥ್, ಜೆ.ವಿ.ಸದಾಶಿವ, ಶಿವಾರೆಡ್ಡಿ, ಎಸ್.ಎಂ.ರಮೇಶ್, ಎಸ್.ರಾಘವೇಂದ್ರ, ದಿಬ್ಬೂರಹಳ್ಳಿ ರಾಮಚಂದ್ರ, ವಿಜಯಭಾವರೆಡ್ಡಿ ಇನ್ನಿತರೆ ಮುಖಂಡರು ಹಾಜರಿದ್ದರು.

Namma Sidlaghatta WhatsApp Channel

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version