Home News ಈಜಾಡಲೆಂದು ಈಜುಕೊಳಕ್ಕೆ ಇಳಿದ FES ಸಿಬ್ಬಂದಿ ಸಾವು

ಈಜಾಡಲೆಂದು ಈಜುಕೊಳಕ್ಕೆ ಇಳಿದ FES ಸಿಬ್ಬಂದಿ ಸಾವು

0
Sidlaghatta Tummanahalli FES Resort Pool Accident

Tummanahalli, Sidlaghatta: ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಚಿಂತಡಪಿ ಗ್ರಾಮದ ಬಳಿ ಇರುವ ನೇಚರ್ ರೆಸಾರ್ಟ್‌ ನಲ್ಲಿ ಈಜಲು ಹೋದ ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಎಫ್‌.ಇ.ಎಸ್ ಸಂಸ್ಥೆಯು ತನ್ನ ಸಿಬ್ಬಂದಿಗೆ 2 ದಿನಗಳ ವಸತಿ ಸಹಿತ ತರಬೇತಿ ಕಾರ್ಯಾಗಾರವನ್ನು ನೇಚರ್ ರೆಸಾರ್ಟ್‌ ನಲ್ಲಿ ಹಮ್ಮಿಕೊಂಡಿದ್ದು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೇಖ ತರಬೇತಿ ಮುಗಿಸಿಕೊಂಡು ತನ್ನ ಸಹುದ್ಯೋಗಿಗಳ ಜತೆ ಈಜುಕೊಳಕ್ಕೆ ಇಳಿದಾಗ ಘಟನೆ ನಡೆದಿದೆ.

ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದ ರೆಸಾರ್ಟ್‌ ನ ನಿರ್ಲಕ್ಷ್ಯದಿಂದಲೆ ಸಾವು ಎಂದು ಮೃತಳ ಕುಟುಂಬದವರು ದೂರಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ನಡೆದಿದ್ದೇನು :

ಶಿಡ್ಲಘಟ್ಟ ತಾಲ್ಲೂಕು ಚಿಂತಡಪಿ ಗ್ರಾಮದ ಬಳಿ ಇತ್ತೀಚೆಗಷ್ಟೆ ಆರಂಭವಾದ ನೇಚರ್ ರೆಸಾರ್ಟ್‌ ನಲ್ಲಿ ಎಫ್‌.ಇ.ಎಸ್ ಸ್ವಯಂ ಸೇವಾ ಸಂಸ್ಥೆಯು ತಮ್ಮ ಸಿಬ್ಬಂದಿಗೆ 2 ದಿನಗಳ ಕಾಲ ವಸತಿ ಸಹಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಎಫ್‌.ಇ.ಎಸ್ ಸಿಬ್ಬಂದಿ ಕುಂದಲಗುರ್ಕಿ ಗ್ರಾಮದ ವಾಸಿ ರೇಖ ಕೂಡ ಭಾಗವಹಿಸಿದ್ದಳು.

ಮೊದಲ ದಿನದ ತರಬೇತಿ ಮುಗಿಸಿಕೊಂಡು ಸಂಜೆ 6.30ರ ಆಸುಪಾಸಿನಲ್ಲಿ ರೇಖ ತನ್ನ ಕೆಲ ಸಹೋದ್ಯೋಗಿಗಳ ಜತೆ ಈಜುಕೊಳಕ್ಕೆ ಇಳಿದಿದ್ದಾಳೆ. ಕೆಲ ಕಾಲ ಈಜಾಡಿದ ರೇಖ ನಂತರ ಅಸ್ವಸ್ಥಗಳಾಗಿದ್ದು ಕೂಡಲೆ ಜತೆಯಲ್ಲಿದ್ದವರು ಆಕೆಯನ್ನು ಈಜುಕೊಳದಿಂದ ಮೇಲೆತ್ತಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಎಫ್‌.ಇ.ಎಸ್ ಸಿಬ್ಬಂದಿಯೆ ರವಾನಿಸಿದ್ದಾರೆ. ಆದರೆ ಅಷ್ಟರಲ್ಲಿ ರೇಖ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.

ನಿಯಮದಂತೆ ಸಂಜೆ 6 ಗಂಟೆ ನಂತರ ಈಜುಕೊಳದಲ್ಲಿ ಈಜಾಡುವುದು ನಿಷಿದ್ದ. ಆದರೆ ರೆಸಾರ್ಟ್‌ ನವರು ಈಜಾಡಲು ಅಲ್ಲಿ ಅವಕಾಶ ಕೊಟ್ಟಿದ್ದಾರಲ್ಲದೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿಲ್ಲ. ಇದರಿಂದಲೆ ರೇಖ ಮೃತಪಟ್ಟಿದ್ದಾಳೆಂದು ರೇಖಳ ಕುಟುಂಬದವರು ದೂರಿದ್ದಾರೆ.

ಆಕ್ರೋಶ :

ವಿಷಯ ತಿಳಿದು ಆಸ್ಪತ್ರೆ ಮುಂದೆ ಜಮಾಯಿಸಿದ ಮೃತಳ ಕುಟುಂಬದವರು ಹಾಗೂ ಕುಂದಲಗುರ್ಕಿ ಗ್ರಾಮಸ್ಥರು ನೇಚರ್ ರೆಸಾರ್ಟ್‌ ನ ಮಾಲೀಕರ ವಿರುದ್ದ ಕಿಡಿ ಕಾರಿದರು. ರೆಸಾರ್ಟ್‌ ನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಮತ್ತು ರಕ್ಷಣಾ ವ್ಯವಸ್ಥೆ ಇಲ್ಲದೆ ನಿಯಮ ಉಲ್ಲಂಘಿಸಿ ರೆಸಾರ್ಟ್ ನಡೆಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ನಿಯಮಗಳನ್ನು ಉಲ್ಲಂಘಿಸಿ ರೆಸಾರ್ಟ್ ನಡೆಸುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ರೇಖಳ ಕುಟುಂಬದವರು ಮತ್ತು ಕುಂದಲಗುರ್ಕಿ ಗ್ರಾಮಸ್ಥರು ರೆಸಾರ್ಟ್ ಮಾಲೀಕರು ಸ್ಥಳಕ್ಕೆ ಆಗಮಿಸಬೇಕು, ನಡೆದ ಘಟನೆ ಬಗ್ಗೆ ವಿವರಿಸಬೇಕು ಎಂದು ಹೇಳಿ ಶವಪರೀಕ್ಷೆ ನಡೆಸದಂತೆ ತಡೆ ಹಾಕಿದರು.

ಸ್ಥಳದಲ್ಲಿದ್ದ ಎಫ್‌.ಇ.ಎಸ್ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ನಡೆದ ಘಟನೆಯನ್ನು ವಿವರಿಸಿದರು. ಪೊಲೀಸರು ರೇಖಳ ಕುಟುಂಬದವರನ್ನು ಮತ್ತು ಕುಂದಲಗುರ್ಕಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ನೀವು ಏನು ದೂರು ನೀಡುತ್ತೀರೋ ಅದರಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದರು.

ಮೃತ ರೇಖಳ ಪತಿ ರಾಜು ಅವರು, ನೇಚರ್ ರೆಸಾರ್ಟ್‌ ನಲ್ಲಿ ಈಜುಕೊಳದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಕಾವಲುಗಾರರನ್ನು ಕೂಡ ನೇಮಿಸಿಲ್ಲ. ತನ್ನ ಪತ್ನಿ ರೇಖ ಸಾವಿಗೆ ರೆಸಾರ್ಟ್‌ ನ ಮಾಲೀಕರಾದ ರಮೇಶ್ ಮತ್ತು ಮಾರೇಗೌಡರು ಕಾರಣವಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version