Home News ಚೀಮಂಗಲದಲ್ಲಿ ವಿನೂತನ “ಹಳ್ಳಿ ಸಂತೆ” ನಿರ್ಮಾಣ

ಚೀಮಂಗಲದಲ್ಲಿ ವಿನೂತನ “ಹಳ್ಳಿ ಸಂತೆ” ನಿರ್ಮಾಣ

0
Cheemangala Sidlaghatta Halli Sante

Cheemangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಸಂತೆ ನಡೆಸಲೆಂದೇ ವಿಶೇಷವಾದ “ಹಳ್ಳಿ ಸಂತೆ” (Halli Sante) ಯನ್ನು ನಿರ್ಮಿಸಲಾಗಿದೆ. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಡಿ.ಎಲ್) ಯೋಜನೆಯಡಿ 48 ಲಕ್ಷ ರೂಗಳ ವೆಚ್ಚದಲ್ಲಿ ಈ ಕಾಮಗಾರಿ ನಡೆದಿದೆ.

 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವೈ.ಹುಣಸೇನಹಳ್ಳಿ ಮತ್ತು ಚೀಮಂಗಲ ಎರಡು ಕಡೆ ಮಾತ್ರ ಈ ರೀತಿಯ “ಹಳ್ಳಿ ಸಂತೆ” ನಿರ್ಮಾಣಕ್ಕೆ ಅನುಮೋದನೆ ದೊರಕಿದ್ದು, ಇದೀಗ ಚೀಮಂಗಲದಲ್ಲಿ ಶೇ 90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

 “ಪ್ರಮುಖ ಸಂತೆ ನಡೆಯುವ ಗ್ರಾಮಗಳಲ್ಲಿ ಮಾದರಿ ಸಂತೆ ಮೈದಾನ ನಿರ್ಮಾಣ ಮಾಡುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸಾಮಾನ್ಯವಾಗಿ ಸಂತೆ ನಡೆಯುವುದು ರಸ್ತೆ ಬದಿಗಳಲ್ಲಿ. ಇದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಸಂತೆಯಲ್ಲಿ ಪಾಲ್ಗೊಳ್ಳುವ ರೈತರು, ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳಿರುವುದಿಲ್ಲ. ಈ ನ್ಯೂನತೆಗಳನ್ನು ಸರಿಪಡಿಸಿ, ಮಾದರಿ ಸಂತೆ ಮೈದಾನ ನಿರ್ಮಾಣ ಮಾಡಲಾಗುತ್ತಿದೆ” ಎನ್ನುತ್ತಾರೆ ಚೀಮಂಗಲ ಗ್ರಾಮ ಪಂಚಾಯಿತಿ ಪಿಡಿಒ ತನ್ವೀರ್ ಅಹಮದ್.

 “ಈಗ ನಿರ್ಮಿಸುತ್ತಿರುವ “ಹಳ್ಳಿ ಸಂತೆ”ಯಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ವ್ಯಾಪಾರಸ್ಥರೂ ತಮ್ಮ ಮಳಿಗೆಗಳನ್ನು ಇಟ್ಟುಕೊಳ್ಳಬಹುದಾಗಿದೆ. ಸುತ್ತಮುತ್ತಲಿನ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಲಿದೆ. ಮಳೆ, ಬಿಸಿಲು, ಗಾಳಿಯ ತೊಂದರೆಯಿರುವುದಿಲ್ಲ. ಕೊಳ್ಳುವವರಿಗೂ ಅನುಕೂಲಕರ. ಇಲ್ಲಿ ಶೌಚಾಲಯ, ಕ್ಯಾಂಟೀನ್ ಮತ್ತು ಕುಡಿಯುವ ನೀರಿನ ಸೌಕರ್ಯ ಕೂಡ ಮಾಡಲಾಗುತ್ತಿದೆ. ಸಂತೆಯ ತ್ಯಾಜ್ಯವನ್ನು ಸಂಗ್ರಹಿಸಲೆಂದೇ ಇಲ್ಲಿ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಇದರಿಂದ ಗೊಬ್ಬರ ಕೂಡ ತಯಾರಿಸಬಹುದಾಗಿದೆ. ಒಟ್ಟಾರೆ ಆರ್ಥಿಕ ಪ್ರಗತಿಗೆ ಇದು ಸಹಾಯಕವಾಗಲಿದೆ” ಎಂದು ಅವರು ವಿವರಿಸಿದರು.

 ಮುಂದೆ “ಹಳ್ಳಿ ಸಂತೆ” ಗೆ ಸಂಬಂಧಿಸಿದಂತೆ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ವಿವಿಧ ಯೋಜನೆಯಡಿ ಗ್ರಾಮ ಪಂಚಾಯಿತಿಯಿಂದ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version