Home News ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0
Children Felicitation Sidlaghatta

Sidlaghatta : ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಉದ್ದೇಶ ಮುಂದಿನ ಪೀಳಿಗೆಯ ಪ್ರತಿಭಾವಂತ ಮಕ್ಕಳಿಗೆ ವಿಶೇಷವಾದ ಜವಾಬ್ದಾರಿಯನ್ನು ಹೊರಿಸುವುದಾಗಿದೆ. ಮಕ್ಕಳ ಸಾಧನೆಗೆ ಪ್ರೋತ್ಸಾಹಿಸುತ್ತಾ ಮುಂದೆ ಅವರು ಸಾಮಾಜಿಕವಾಗಿ ಇತರರಿಗೆ ನೆರವಾಗುವ ಹೊಣೆಯನ್ನು ನೀಡುತ್ತಿದ್ದೇವೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಗುರುವಾರ ಶ್ರೀಕೆಂಪಣ್ಣಸ್ವಾಮಿ, ಶ್ರೀವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 9 ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬರಿ ವಿದ್ಯೆ ಇದ್ದರೆ ಸಾಲದು ಸನ್ನಡತೆ, ಸಂಸ್ಕಾರ, ವಿವೇಕವು ಸಹ ಇರಬೇಕು. ವಿದ್ಯಾರ್ಥಿಗಳು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇತರರಿಗೆ ಮಾದರಿಯಾಗುವಂತೆ ಸಾಧಕರಾಗಬೇಕು. ಸೇವಾಮನೋಭಾವ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಮನೋಬಾವ ಬೆಳೆಸಿಕೊಳ್ಳಿ ಎಂದರು.

ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಪೋಷಕರು ಮಕ್ಕಳಿಗಾಗಿ ಸರ್ವಸ್ವವನ್ನು ಧಾರೆ ಎರೆಯುತ್ತಾರೆ. ಅದಕ್ಕೆ ತಕ್ಕಂತೆ ಮಕ್ಕಳು ಪೋಷಕರಿಗೆ ಮತ್ತು ಊರಿಗೆ ಕೀರ್ತಿ ತರುವಂತೆ ಸಾಧನೆ ಮಾಡಬೇಕು. ಶಿಕ್ಷಣಕ್ಕೆ ಒತ್ತುಕೊಡುವ ಕೆಲಸವನ್ನು ಟ್ರಸ್ಟ್ ವತಿಯಿಂದ ಮಾಡುತ್ತಿರುವುದು ಅನುಕರಣೀಯ ಎಂದರು.

ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ನಾರಾಯಣಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿಕೊಂಡು ಅದರಲ್ಲಿ ಸಾಧನೆ ಮಾಡಬೇಕು. ಸಕಾರಾತ್ಮಕ ಚಿಂತನೆಯಿಂದ ಜೀವನದಲ್ಲಿ ಯಾವುದೇ ಸವಾಲನ್ನು ಎದುರಿಸಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಸಕ್ತಿವಹಿಸಿ. ಭವಿಷ್ಯ ಉಜ್ವಲವಾಗಬೇಕಾದರೆ ಈಗಿನಿಂದಲೇ ಉತ್ತಮ ಗುರಿ ಹೊಂದಿರಬೇಕು ಎಂದರು.

ಶ್ರೀ ಕೆಂಪಣ್ಣಸ್ವಾಮಿ, ಶ್ರೀ ವೀರಣ್ಣಸ್ವಾಮಿ ದೇವಾಲಯದ ಒಕ್ಕಲಿನ ಕುಲಬಾಂಧವರ ಮಕ್ಕಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 2022-2023ನೇ ಸಾಲಿನಲ್ಲಿ ಶೇ 85 ಕ್ಕಿಂತಲೂ ಹೆಚ್ಚು ಅಂಕಗಳಿಸಿರುವ ಒಟ್ಟು 85 ಮಕ್ಕಳನ್ನು ಅವರ ಪೋಷಕರೊಂದಿಗೆ ಪುರಸ್ಕರಿಸಲಾಯಿತು.

ಟ್ರಸ್ಟ್‌ ನ ಅದ್ಯಕ್ಷ ಎನ್,ನಾಗರಾಜ್, ಉಪಾಧ್ಯಕ್ಷ ಆರ್.ರವಿ ಬಿಳಿಶಿವಾಲೆ, ಖಜಾಂಚಿ ಮುನಿಸ್ವಾಮಿಗೌಡ, ಕಾರ್ಯದರ್ಶಿ ಅಶ್ವತ್ಥಯ್ಯ, ಡಾ.ಜ್ಯೋತ್ಸ್ನಾ ಕೃಷ್ಣಪ್ಪ, ಬಿ.ಎನ್.ಸಚಿನ್, ಗೊರಮೊಡಗು ರಾಜಣ್ಣ, ಆನೂರು ಎನ್. ವಿಜಯೇಂದ್ರ, ನಿವೃತ್ತ ಶಿಕ್ಷಕ ಕೆಂಪಣ್ಣ, ಲಕ್ಷ್ಷಣ್, ಜಯರಾಮ್, ಗೋವಿಂದರಾಜ್, ರವಿಕುಮಾರ್, ಮದುಸೂಧನ್, ಲಕ್ಷ್ಮೀನಾರಾಯಣ, ರಸಿಕ ಎ.ನಾರಾಯಣಸ್ವಾಮಿ, ಸೌಭಾಗ್ಯ ವೇಣುಗೋಪಾಲ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version