News

ನಾಗಪುರದ ದೀಕ್ಷಾಭೂಮಿಗೆ ದಲಿತ ಸಂಘರ್ಷ ಸಮಿತಿಯ ಧಮ್ಮಯಾತ್ರೆ

Sidlaghatta Dalit Sangharsha Samiti Dhammayatra bus leaves for Nagpur Deekshabhoomi

Sidlaghatta : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಶಾಖೆಯ ವತಿಯಿಂದ ಆಯೋಜಿಸಿದ್ದ ಧಮ್ಮಯಾತ್ರೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ವಿವಿಧ ಗ್ರಾಮಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾನುವಾರ ಸಂಜೆ ನಗರದ ಪ್ರವಾಸಿ ಮಂದಿರದಿಂದ ಬಸ್ ಮೂಲಕ ಮಹಾರಾಷ್ಟ್ರದ ನಾಗಪುರಕ್ಕೆ ಪ್ರಯಾಣ ಬೆಳೆಸಿದರು.

ಧಮ್ಮಯಾತ್ರೆಯ ಉದ್ದೇಶವೇನು?

ನಾಗಪುರದ ದೀಕ್ಷಾಭೂಮಿಯಲ್ಲಿ ಅಶೋಕ ವಿಜಯದಶಮಿ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು, ಬುದ್ಧನ ತತ್ವಗಳು, ಸಮಾನತೆ, ಸ್ವಾಭಿಮಾನ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಹೊಂದಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಲ್ಲಿ ಬಿತ್ತುವುದು, ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಧಮ್ಮಯಾತ್ರೆಯ ಸಂದರ್ಭದಲ್ಲಿ ಮುಖಂಡರು ಒತ್ತು ನೀಡಿದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳು ಸಮಾನತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಮಾರ್ಗದರ್ಶಿಯಾಗಿವೆ. ಈ ಮಹನೀಯರ ಆಶಯಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ನಿಟ್ಟಿನಲ್ಲಿ ಧಮ್ಮಯಾತ್ರೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದು ಸಂಘಟಕರ ಅಭಿಪ್ರಾಯವಾಗಿದೆ.

ಯಾರೆಲ್ಲ ಭಾಗವಹಿಸಿದ್ದರು?

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್, ಎ.ಎಲ್. ನಾರಾಯಣಸ್ವಾಮಿ, ಹೆಣ್ಣೂರು ಸುಬ್ರಮಣಿ, ಎಲ್.ಎನ್. ಹೊಸೂರು ಶಿವರಾಜು, ತೋಕಲಹಳ್ಳಿ ಆಂಜಿನಪ್ಪ, ಭೈರಸಂದ್ರ ದೇವರಾಜು, ಹಿತ್ತಲಹಳ್ಳಿ ದೇವರಾಜು, ವರಸಂದ್ರ ನಾರಾಯಣಸ್ವಾಮಿ, ದೇವರಾಜು ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ