Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (District Institute of Education and Training – DIET) ಯ ಹಿರಿಯ ಉಪನ್ಯಾಸಕಿ ವಾಣಿ ಅವರು ಗುರುವಾರ ಭೇಟಿ ನೀಡಿ, ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿ, ಬೋಧನಾ ವಿಧಾನಗಳ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ತರಗತಿ ಚಟುವಟಿಕೆಗಳಲ್ಲಿ ಅವರ ಭಾಗವಹಿಸುವಿಕೆ ಹಾಗೂ ಕಲಿಕೆಯಲ್ಲಿನ ಆಸಕ್ತಿಯನ್ನು ವಾಣಿ ಅವರು ಗಮನಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪಠ್ಯ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಅವರ ಅರಿವು ಮತ್ತು ಚಿಂತನಾ ಸಾಮರ್ಥ್ಯವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಣಿ, “ವಿದ್ಯಾರ್ಥಿಗಳ ಕಲಿಕೆಯಲ್ಲಿ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ಪಾಠ ಬೋಧನೆಯ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಗಮನಿಸಬೇಕು. ಮಕ್ಕಳಲ್ಲಿ ಪ್ರಶ್ನಿಸುವ, ಚಿಂತಿಸುವ ಮತ್ತು ಸ್ವತಂತ್ರವಾಗಿ ಕಲಿಯುವ ಮನೋಭಾವ ಬೆಳೆಸಬೇಕು” ಎಂದು ತಿಳಿಸಿದರು. ಸರಳ ಬೋಧನಾ ಸಾಮಗ್ರಿಗಳ ಬಳಕೆ, ಗುಂಪು ಚಟುವಟಿಕೆಗಳು, ಪ್ರಶ್ನೋತ್ತರ, ಚರ್ಚೆ ಹಾಗೂ ವಿದ್ಯಾರ್ಥಿ ಕೇಂದ್ರಿತ ಕಲಿಕಾ ವಿಧಾನಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ಶಿಕ್ಷಕರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಎಂ. ಉಮಾದೇವಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಶ್ವಥ್ ನಾರಾಯಣ್ ಹಾಗೂ ಶಿಕ್ಷಕರಾದ ಆನಂದ್ ಕುಮಾರ್, ಮಂಜುನಾಥ್, ನಾಗರತ್ನ ಸೇರಿದಂತೆ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
In English: A senior lecturer from the Chikkaballapur District Institute of Education and Training (DIET) visited a government primary school in Sidlaghatta taluk, reviewed classroom teaching and student learning levels, and advised teachers to use activity-based, student-centered methods. Shoes and socks were also distributed to students during the visit.
ಇದೇ ಶಾಲೆಯ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯ ಸಾಧನೆ ಕುರಿತ ವರದಿಯನ್ನೂ ನೋಡಿ.








