
Doddatekahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ತಹಶೀಲ್ದಾರ್ ಬಿ.ಎಸ್.ರಾಜೀವ್ ಅವರು ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸವಲತ್ತು ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮೀಣ ಭಾಗದ ಜನತೆ ತಮಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಈ ಕಾರ್ಯಕ್ರಮದ ಮೂಲಕ ಜನರೊಂದಿಗೆ ಬೆರೆತು ಅಗತ್ಯ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಮುನಿರಾಜು ಮಾತನಾಡಿ, ಸರ್ಕಾರ ಎಂದರೆ ಕೇವಲ ಅಧಿಕಾರಿಗಳು ಮಾತ್ರವಲ್ಲ, ಬದಲಿಗೆ ಎಲ್ಲಾ ಸಾರ್ವಜನಿಕರೂ ಅಧಿಕಾರಿಗಳೊಂದಿಗೆ ಸೇರಿದಾಗ ಮಾತ್ರ ಅದು ಸರ್ಕಾರ ಆಗುತ್ತದೆ. ಎಲ್ಲರೂ ನನ್ನದು ಎನ್ನುವ ಭಾವನೆ ಬಿಟ್ಟು ನಮ್ಮದು ಎನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮದ 10 ಫಲಾನುಭವಿಗಳಿಗೆ ಪಿಂಚಣಿ ಆದೇಶಪತ್ರ ವಿತರಣೆ ಸೇರಿದಂತೆ ಗ್ರಾಮದ ಕಾಲುವೆ ಹಾಗೂ ಸ್ಮಶಾನದ ರಸ್ತೆಯ ವಿವಾದ ಬಗೆಹರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲರೆಡ್ಡಿ, ಅರಣ್ಯ ಇಲಾಖೆಯ ಸುಧಾಕರ್, ರೇಷ್ಮೆ ಇಲಾಖೆಯ ಶಾಂತರಸ, ಎಡಿಎಲ್‌ಆರ್ ವಸಂತಕುಮಾರ್, ಗ್ರಾಮ ಪಂಚಾಯಿತಿ ಪಿಡಿಓ ವಜ್ರೇಶ್, ಶಿಕ್ಷಣ ಸಂಯೋಜಕ ಭಾಸ್ಕರ್‌ಗೌಡ, ಬಿ.ಆರ್.ಪಿ ಮಂಜುನಾಥ್, ಆರೋಗ್ಯ ಇಲಾಖೆಯ ದೇವರಾಜ್, ಪಶು ವೈದ್ಯಾಧಿಕಾರಿ ಮುನಿಕೃಷ್ಣ, ರಾಜಸ್ವ ನಿರೀಕ್ಷಕ ಅಮರೇಂದ್ರ, ಮುಖಂಡರಾದ ಮಂಜುನಾಥ, ಕುಮಾರ್, ಪುಜಪ್ಪ, ಆಂಜಿನಪ್ಪ, ಮುನಿರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.