
Sundrahalli, Sidlaghatta : ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ವಿಶೇಷವಾಗಿ ನಮ್ಮ ಸಂಸ್ಕೃತಿಯ ಪರಂಪರೆಗಳ ಬಳುವಳಿಯನ್ನು ಸಾರುವಂತಹ ಜನಪದ ಕಲೆಗಳನ್ನು ಕಲಿಯುವ ಮೂಲಕ ಶಿಕ್ಷಣವನ್ನು ಪಡೆಯಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕ ಪಾ.ಮು.ಚಲಪತಿಗೌಡ ತಿಳಿಸಿದರು.
ತಾಲ್ಲೂಕಿನ ಸುಂಡ್ರಹಳ್ಳಿ ಬಳಿಯಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗಿರಿಜನ ಉಪ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಆರು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದೂರದರ್ಶನ ಹಾಗು ಮೊಬೈಲ್ ವೀಕ್ಷಣೆ ಮಕ್ಕಳನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸುತ್ತಿದೆ. ಹಾಗಾಗಿ ಮಕ್ಕಳು ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವ ಜನಪದ ಕಲೆಗಳನ್ನು ಹೆಚ್ಚು ಹೆಚ್ಚು ಕಲಿಯುವ ಮೂಲಕ ಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ, ಡೊಳ್ಳು ಕುಣಿತ ತರಬೇತುದಾರ ಈಧರೆ ಪ್ರಕಾಶ್ ಮಾತನಾಡಿ, ಮನೆ ಮತ್ತು ಗ್ರಾಮವನ್ನು ಬಿಟ್ಟು ಶಿಕ್ಷಣ ಪಡೆಯುವ ಸದುದ್ದೇಶಕ್ಕೆ ಪೋಷಕರಿಂದಲೂ ದೂರ ಇದ್ದುಕೊಂಡು ವಿದ್ಯಾಭ್ಯಾಸ ಪಡೆಯುತ್ತಿರುವ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಇಲಾಖೆಗಳ ಸಹಕಾರದಿಂದ ಜನಪದ ಕಲೆಗಳ ತರಬೇತಿ ನೀಡುವ ಸದಾವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. ಸುಮಾರು ಹದಿನೈದು ವರ್ಷಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಸೇರಿದಂತೆ ಅನ್ಯ ರಾಜ್ಯಗಳಲ್ಲೂ ಕೂಡ ಪ್ರದರ್ಶನಗಳು ನೀಡಿರುವುದು ನಮ್ಮ ಈಧರೆ ತಂಡ ಹಿರಿಮೆಯಾಗಿದೆ ಎಂದರು.
ಇಂದಿರಾ ಗಾಂಧಿ ವಸತಿಶಾಲೆ ಪ್ರಾಂಶುಪಾಲ ಮೂರ್ತಪ್ಪ, ಹೊಸಪೇಟೆ ಗ್ರಾ.ಪಂ ಸದಸ್ಯ ಸುಂಡ್ರಹಳ್ಳಿ ರವಿ, ಈ ಧರೆ ಸಮತಾ ಸೇನೆ ತಾಲ್ಲೂಕು ಅಧ್ಯಕ್ಷ ವೆಂಕಟರಾಮಪ್ಪ, ಉಪಾಧ್ಯಕ್ಷ ವೆಂಕಟರಮಣಪ್ಪ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಜರಿದ್ದರು.