
Sidlaghatta : ದೇಶದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಮನೆ ಮನೆ ಮೇಲೂ ಭಾರತದ ತ್ರಿವರ್ಣ ಧ್ವಜ ಹಾರಾಡಬೇಕಿದ್ದು ಅದಕ್ಕಾಗಿ ಹರ್ ಘರ್ ತಿರಂಗ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗ ಅಭಿಯಾನದ ಪೂರ್ವ ಸಿದ್ದತೆಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ವಿವಿಧ ಮೋರ್ಚಾಗಳ ಅಧ್ಯಕ್ಷರುಗಳ ಸಭೆಯಲ್ಲಿ ಅವರು ಮಾತನಾಡಿದರು.
ಆಗಸ್ಟ್ 15 ರಂದು ದೇಶದ ಎಲ್ಲರ ಮನೆ ಮನೆ ಮೇಲೂ ರಾಷ್ಟ್ರ ಧ್ವಜ ಹಾರಾಡಬೇಕು, ದೇಶ ಪ್ರೇಮವನ್ನು ಮೆರೆಯಬೇಕೆಂಬ ಸದುದ್ದೇಶ, ದೇಶಪ್ರೇಮದ ಸಂದೇಶ ನೀಡುವ ಹರ್ ಘರ್ ತಿರಂಗ ಅಭಿಯಾನವನ್ನು ನಾವೆಲ್ಲರೂ ಸೇರಿ ಜಾತಿ ಧರ್ಮ ಭಾಷೆಯ ತಾರತಮ್ಯ ಬಿಟ್ಟು ಆಚರಿಸುವ ಮೂಲಕ ದೇಶಕ್ಕಾಗಿ ಎಲ್ಲರೂ ಒಗ್ಗೂಡಬೇಕೆಂದರು.
ಈ ಅಭಿಯಾನವು ದೇಶದ ನಾಗರಿಕರ ಮನದಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಲು ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ತ್ಯಾಗವನ್ನು ಸ್ಮರಿಸಿಕೊಳ್ಳುವ ಅವಕಾಶವಾಗಿದೆ. ಈ ಅಭಿಯಾನವು ರಾಷ್ಟ್ರೀಯ ಧ್ವಜದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಅದನ್ನು ಗೌರವಿಸುವಂತೆ ಪ್ರೋತ್ಸಾಹಿಸಲು ಸಹಕಾರಿಯಾಗಿದೆ. ಈ ಅಭಿಯಾನವು ಸಮಾಜದ ಎಲ್ಲಾ ವರ್ಗದವರನ್ನು ಒಟ್ಟುಗೂಡಿಸಿ, ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿಯೆ ಅತಿ ಹೆಚ್ಚು ಕಾಲ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸುತ್ತಾ ಹೊಸ ದಾಖಲೆಯನ್ನು ಸೃಷ್ಟಿಸಿದ್ದು ಅವರಿಗೆ ಸಭೆಯಲ್ಲಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಸಭೆಯಲ್ಲಿ ಜಿಲ್ಲೆಯಲ್ಲಿ ತಿರಂಗ ಅಭಿಯಾನದ ಯಶಸ್ಸಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಚರ್ಚಿಸಲಾಯಿತು.
ಹರ್ ಘರ್ ತಿರಂಗ ಯಾತ್ರೆಯನ್ನು ಯಶಸ್ವಿ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು ಅವರು ಸಭೆಯಲ್ಲಿ ಮಾಹಿತಿ ನೀಡಿದರು.
ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಚಿಂತಾಮಣಿ ಕ್ಷೇತ್ರದ ಮುಖಂಡ ವೇಣುಗೋಪಾಲ್, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲ, ಎಸ್.ಟಿ ಮೋರ್ಚ ರಾಜ್ಯ ಉಪಾಧ್ಯಕ್ಷ ಅರುಣ್‌ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮುರಳಿಧರ್, ಕೆ.ಬಿ.ಮುರಳಿ, ಜಿಲ್ಲಾ, ತಾಲ್ಲೂಕು ಎಲ್ಲ ಮೋರ್ಚಾಗಳ ಅಧ್ಯಕ್ಷರು ಹಾಜರಿದ್ದರು.