Home News ಶಿಡ್ಲಘಟ್ಟ ನಗರದ ಡಾಲ್ಫಿನ್ ಕಾಲೇಜಿನಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ

ಶಿಡ್ಲಘಟ್ಟ ನಗರದ ಡಾಲ್ಫಿನ್ ಕಾಲೇಜಿನಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ

0
Dolphin's College Law Awareness Programme

Sidlaghatta : ಸಮಾಜದಲ್ಲಿ ಪರಸ್ಪರ ಗೌರವ, ಪ್ರೀತಿ ಮತ್ತು ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಳ್ಳುವುದು ಸತ್ಪ್ರಜೆಯ ಲಕ್ಷಣ. ಹಿರಿಯರಿಗೆ ಗೌರವ ನೀಡುವುದು, ಪರಿಸರವನ್ನು ಸ್ವಚ್ಛವಾಗಿಡುವುದು ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ನಾಗರಿಕ ಜೀವನದ ಪ್ರಮುಖ ಮೌಲ್ಯಗಳಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.

ನಗರದ ಡಾಲ್ಫಿನ್ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ ಹಾಗೂ ಇತರೆ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳ ಜೊತೆಗೆ ನಾಗರಿಕರ ಕರ್ತವ್ಯಗಳನ್ನು ಪಾಲಿಸುವುದು ಮುಖ್ಯ. ನಾವು ಸಮಾಜದ ಒಂದು ಭಾಗವೆಂದು ಅರಿತು, ನಮ್ಮ ಪ್ರತಿಯೊಂದು ಕಾರ್ಯವೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂಬ ಜವಾಬ್ದಾರಿಯನ್ನು ಹೊಂದಿರಬೇಕು. ವೈಯಕ್ತಿಕ ಹಿತಕ್ಕಿಂತ ರಾಷ್ಟ್ರದ ಹಿತಕ್ಕೆ ಆದ್ಯತೆ ನೀಡುವುದು ಮುಖ್ಯ. ಪ್ರತಿಯೊಬ್ಬ ನಾಗರಿಕನಿಗೂ ಸಾಮಾನ್ಯ ಕಾನೂನು ತಿಳುವಳಿಕೆ ಅತ್ಯಗತ್ಯ. “ಕಾನೂನು ಗೊತ್ತಿಲ್ಲ” ಎಂಬ ನೆಪದಲ್ಲಿ ತಪ್ಪು ಮಾಡಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಆದ್ದರಿಂದ ಕಾನೂನಿಗೆ ತಲೆಬಾಗಿ ನಡೆಯುವುದು ಸತ್ಪ್ರಜೆಯ ಮೊದಲ ಲಕ್ಷಣ ಎಂದು ಹೇಳಿದರು.

ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಮಾತನಾಡಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡುವುದು ಕಾನೂನು ಬಾಹಿರ. ಅಪಘಾತ ಸಂಭವಿಸಿದರೆ ಪೋಷಕರು ಜವಾಬ್ದಾರರಾಗಿರುತ್ತಾರೆ ಮತ್ತು ಭಾರಿ ದಂಡ ಅಥವಾ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿ, ಸಂಚಾರ ನಿಯಮಗಳು ಮತ್ತು ಚಾಲನಾ ಪರವಾನಗಿ ಹೊಂದುವ ಅನಿವಾರ್ಯತೆಯ ಬಗ್ಗೆ ಮಾಹಿತಿ ನೀಡಿ, ಆರ್.ಟಿ.ಒ ಅಧಿಕಾರಿಗಳನ್ನು ಕಾಲೇಜಿಗೆ ಕರೆದುಕೊಂಡು ಬರುತ್ತೇನೆ, ಎಲ್ಲರೂ ಆನ್ ಲೈನ್ ಮೂಲಕ ಅರ್ಜಿ ತುಂಬಿ ಪರವಾನಗಿ ಪಡೆದುಕೊಳ್ಳಿ ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎಸ್.ಸುಕನ್ಯ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಂಜಿತಾ, ಎ.ಪಿ.ಪಿ ಮೊಹಮ್ಮದ್ ಖಾಜಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ವಕೀಲ ಮುನಿಶಾಮಿಗೌಡ, ಡಾಲ್ಫಿನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version