Home News ಶ್ರೀ ಯೋಗಿ ದ್ಯಾವಪ್ಪತಾತನವರ ದೇವಾಲಯದ ಕ್ಷೀರ ಹಾಗೂ ಕಾಯಿ ಉಟ್ಲು ಪರಿಷೆ 

ಶ್ರೀ ಯೋಗಿ ದ್ಯಾವಪ್ಪತಾತನವರ ದೇವಾಲಯದ ಕ್ಷೀರ ಹಾಗೂ ಕಾಯಿ ಉಟ್ಲು ಪರಿಷೆ 

0
Sidlaghatta Dyavappanagudi Yogi Dyavappa Tata Utlu Parishe

ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಂತಿ ಗ್ರಾಮದ ಶ್ರೀ ಯೋಗಿ ದ್ಯಾವಪ್ಪತಾತ ನವರ ದೇವಾಲಯದ ಬಳಿ ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಕಾರ್ಯಕ್ರಮ ನಡೆಯಿತು. 

ದೇವಸ್ಥಾನ ಮುಂಭಾಗದಲ್ಲಿ ಸುಮಾರು 12 ಅಡಿ ಎತ್ತರದ ಕಂಬದ ಮೇಲೆ ವೃತ್ತಾಕಾರದ ಉಟ್ಲು ಮಂಟಪಕ್ಕೆ ಮಾವಿನ ತೋರಣ ಮತ್ತು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಜಯಂತಿಗ್ರಾಮ (ದ್ಯಾವಪ್ಪನಗುಡಿ) ದಲ್ಲಿ ಉಟ್ಲು ಉತ್ಸವ ಕಾರ್ಯಕ್ರಮ ಪ್ರತಿವರ್ಷ ನಡೆಯುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೊರೊನಾ ದಿಂದ ಕೇವಲ ಪೂಜೆ ಮಾತ್ರ ನಡೆದಿತ್ತು. ಈ ವರ್ಷ ಅದ್ದೂರಿ ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಕಾರ್ಯಕ್ರಮವನ್ನು ದೊಡ್ಡತೇಕಹಳ್ಳಿ ಗ್ರಾಮಪಂಚಾಯಿತಿಯ ಅಜ್ಜಕದಿರೇನಹಳ್ಳಿ ಗ್ರಾಮಸ್ಥರು ನಡೆಸಿಕೊಟ್ಟರು. 

ತೆಂಗಿನಕಾಯಿಗಳನ್ನು ಚೀಲದಿಂದ ಸುತ್ತಿ ಹಗ್ಗದಿಂದ  ಕಟ್ಟಲಾಗಿತ್ತು. ಈ ಭಾರಿ ಭಕ್ತಾದಿಗಳ ಹರಿಕೆಗಳು ಹೆಚ್ಚಾಗಿದ್ದರಿಂದ ಸುಮಾರು 7-8 ಕಾಯಿ ಉಟ್ಲುಗಳನ್ನ ಕಂಬದಲ್ಲಿ ಕಟ್ಟಲಾಗಿತ್ತು. ಉಟ್ಲು ಕಂಬದ ಮೇಲೆ ಇಬ್ಬರು ವ್ಯಕ್ತಿಗಳು ಚಕ್ರವನ್ನು ತಿರುಗಿಸಿದರು. ಸುಮಾರು ಹತ್ತು ಮಂದಿ ಒಬ್ಬರಾದ ಮೇಲೆ ಒಬ್ಬರಂತೆ ಉಟ್ಲು ಕಾಯಿಗಳನ್ನು ಒಡೆದರು.

ಉಟ್ಲು ಕಂಬದ ಮೇಲೆ ಕುಳಿತು ಉಟ್ಲು ತಿರುಗಿಸುವವರು ಇಬ್ಬರು, ಕಾಯಿ ಹೊಡೆಯುವವರ ಗುಂಪು ಮತ್ತು ಅವರಿಗೆ ನೀರೆರೆಚುವವರದ್ದೊಂದು ಗುಂಪು, ಇವರ ನಡುವೆ ಸ್ಪರ್ಧೆ ಏರ್ಪಟ್ಟು, ಇವೆಲ್ಲವನ್ನು ತಪ್ಪಿಸಿ ಕಾಯಿ ಹೊಡೆಯುವ ದೃಶ್ಯ ನೋಡುಗರ ಕಣ್ಣಿಗೆ ಮನರಂಜನೆಯಾಗಿತ್ತು.

ಭಕ್ತಾದಿಗಳು ಅದ್ದೂರಿ ಜಾತ್ರೆಗೆ ಆಗಮಿಸಿ ಯೋಗಿ ದ್ಯಾವಪ್ಪತಾತನವರ ದರ್ಶನ ಪಡೆದರು. ಪ್ರಸಾದ ವಿನಿಯೋಗದಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ಬಂದು ಪ್ರಸಾದವನ್ನು ಪಡೆದರು. ಅಜ್ಜಕದಿರೇನಹಳ್ಳಿ ಹಾಗೂ ಶಿಡ್ಲಘಟ್ಟದಿಂದ ಪಾನಕದ ಗಾಡಿಗಳಲ್ಲಿ ಭಕ್ತರು ತಂದಿದ್ದು, ತಂಪಾಗಿರುವ ಮಜ್ಜಿಗೆ, ಪಾನಕ, ಕೋಸಂಬರಿಯನ್ನು ಭಕ್ತಾದಿಗಳಿಗೆ ಹಂಚಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version