Sidlaghatta : ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಸೇರಿದಂತೆ ಕಡಿಮೆ ಕಾಗದ ಬಳಕೆ ಹಾಗು ಕಡತಗಳ ತ್ವರಿತ ವಿಲೇವಾರಿ ಮಾಡುವ ಸಲುವಾಗಿ ಸರ್ಕಾರ ಇ ಆಪೀಸ್ ತಂತ್ರಾಂಶ ಜಾರಿಗೆ ತಂದಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಇ ಆಫೀಸ್ ತಂತ್ರಾಂಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇ ಆಪೀಸ್ ತಂತ್ರಾಂಶದಿಂದ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಲಿದ್ದು ಕಡತಗಳ ಮೇಲೆ ದಿನಾಂಕ ಮತ್ತು ಸಮಯ ನಮೂದಾಗುತ್ತದೆ. ಯಾರ ಫೈಲ್ ಯಾರ ಬಳಿ ಇದೆ, ಕಡತದ ಸ್ಥಿತಿಗತಿಗಳು ನೋಡಲು ಸಹಾಯವಾಗುತ್ತದೆ. ಇಲ್ಲಿ ವಿಳಂಬಕ್ಕೆ ಅವಕಾಶವೇ ಇರುವುದಿಲ್ಲ. ಇ ಆಪೀಸ್‌ನಲ್ಲಿ ನೋಟ್ ಸೀಟ್, ಕಡತಗಳು ಯಾವ ಹಂತದಲ್ಲಿವೆ ಎನ್ನುವುದನ್ನು ಮೇಲಾಧಿಕಾರಿಗಳು ಗಮನಿಸುವ ವ್ಯವಸ್ಥೆಯಿರುವುದರಿಂದ ವಿನಾಕಾರಣ ವಿಳಂಬಕ್ಕೆ ಸಾಧ್ಯವಿರುವುದಿಲ್ಲ ಎಂದರು.
ಬೇರೆ ಬೇರೆ ಕಚೇರಿಯಿಂದ ಬರುವ ಪ್ರಮುಖ ಪತ್ರಗಳು ಯಾರದೋ ಬಳಿ ಉಳಿದು ಸಂಬಂಧಪಟ್ಟ ಅಧಿಕಾರಿಗೆ ಸಿಗುವುದು ಈ ಹಿಂದೆ ತಡವಾಗುತ್ತಿತ್ತು. ಈ ಎಲ್ಲಾ ತೊಂದರೆ ತಪ್ಪಿಸಲು ಇ ಆಫೀಸ್ ತಂತ್ರಾಂಶ ಸರ್ಕಾರ ಜಾರಿಗೆ ತಂದಿದ್ದು ಸಿಬ್ಬಂದಿ ಜಾಗೃತರಾಗಿ ಕೆಲಸ ನಿರ್ವಹಿಸಬೇಕು ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾ.ಪಂ ಇಓ ಜಿ.ಮುನಿರಾಜ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸಲು ನಾಯ್ಡು, ಜೆಡಿಎಸ್ ಮುಖಂಡ ತಾದೂರು ರಘು, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.