Sidlaghatta : ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಜೈವಿಕ ಗೊಬ್ಬರ, ವರ್ಮಿ ಕಾಂಪೋಸ್ಟ್ ಹಾಗೂ ವೇಸ್ಟ್ ಡಿಕಂಪೋಸರ್ಗಳ ಬಳಕೆ ಪರಿಣಾಮಕಾರಿ ಎಂದು ಕೃಷಿ ತಜ್ಞರು ತಿಳಿಸಿದರು.
In English: Agriculture experts told farmers in K. Muttukadahalli village, Sidlaghatta taluk, that biofertilizers, vermicompost and waste decomposers are effective ways to reduce dependence on chemical fertilizers and protect soil health. The awareness session was organised by final-year GKVK students staying in the village under a rural agricultural experience programme, who also briefed farmers on low-cost fish farming as a supplementary income source.
ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮದಡಿ ವಾಸ್ತವ್ಯ ಹೂಡಿ, ರೈತರೊಂದಿಗೆ ಬೆರೆತು ಕೃಷಿ ಚಟುವಟಿಕೆಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ಇದರ ಅಂಗವಾಗಿ ಸೋಮವಾರ ಸಂಜೆ ಜೈವಿಕ ಗೊಬ್ಬರ, ವರ್ಮಿ ಕಾಂಪೋಸ್ಟ್, ವೇಸ್ಟ್ ಡಿಕಂಪೋಸರ್ ಹಾಗೂ ಮೀನುಗಾರಿಕೆ ಕುರಿತು ರೈತರಿಗಾಗಿ ಅರಿವು ಸಭೆ ನಡೆಯಿತು.
ಸಭೆಯಲ್ಲಿ ಮಣ್ಣಿನ ವಿಜ್ಞಾನ ವಿಭಾಗದ ಡಾ. ಗಾಯತ್ರಿ, ಕೃಷಿ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಡಾ. ಲಕ್ಷ್ಮೀಪತಿ ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ವಿಭಾಗದ ಡಾ. ಹರ್ಷ ಅವರು ರೈತರಿಗೆ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿ ಅಫ್ಶಾನ್ ಅವರು ಜೈವಿಕ ಗೊಬ್ಬರಗಳ ಮಹತ್ವ ಮತ್ತು ಬಳಕೆಯ ಕುರಿತು ಮಾಹಿತಿ ನೀಡಿದರು. ಸಂದೀಪ್ ಅವರು ವರ್ಮಿ ಕಾಂಪೋಸ್ಟ್ ತಯಾರಿಕೆ ಹಾಗೂ ಅದರ ಉಪಯೋಗಗಳನ್ನು ವಿವರಿಸಿದರು. ರಾಹುಲ್ ಅವರು ವೇಸ್ಟ್ ಡಿಕಂಪೋಸರ್ ತಯಾರಿಸುವ ವಿಧಾನ ಮತ್ತು ಕೃಷಿಯಲ್ಲಿ ಅದರ ಬಳಕೆಯ ಕುರಿತು ಮಾಹಿತಿ ನೀಡಿದರು.
ಕೃಷಿ ಹಾಗೂ ಮನೆಯ ಸಾವಯವ ತ್ಯಾಜ್ಯವನ್ನು ಬಳಸಿಕೊಂಡು ವರ್ಮಿ ಕಾಂಪೋಸ್ಟ್ ಮತ್ತು ವೇಸ್ಟ್ ಡಿಕಂಪೋಸರ್ ತಯಾರಿಸುವ ಮೂಲಕ ಉಪಯುಕ್ತ ಸಾವಯವ ಗೊಬ್ಬರವನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಬಹುದು. ಇದರಿಂದ ಮಣ್ಣಿನ ಆರೋಗ್ಯ ಕಾಪಾಡುವುದರ ಜತೆಗೆ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಲಾಯಿತು. ಕೃಷಿಯೊಂದಿಗೆ ಮೀನುಗಾರಿಕೆಯಂತಹ ಪೂರಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ರೈತರು ಹೆಚ್ಚುವರಿ ಆದಾಯ ಗಳಿಸಬಹುದಾದ ಅವಕಾಶಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ರೈತರು ವಿವಿಧ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು. ಗ್ರಾಮದಲ್ಲಿ ವಾಸ್ತವ್ಯ ಹೂಡಿ ರೈತರೊಂದಿಗೆ ನೇರವಾಗಿ ಬೆರೆತು ವೈಜ್ಞಾನಿಕ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸುತ್ತಿರುವ ವಿದ್ಯಾರ್ಥಿಗಳ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಮೋನಿಕಾ, ನಂದಿನಿ ನಾಯಕ್, ಮೋನಿಯಾ, ಮಾಳವಿಕಾ, ಪ್ರಿಯಾ, ನೀಲು, ನೇಹಾ, ಪ್ರಜ್ವಲ್, ಲಕ್ಷ್ಮಿ, ಮಾದೇಶ್, ಮಲ್ಲಿಕಾರ್ಜುನ, ಪವನ್, ಸುಮಂತ್, ಕಾವೇರಪ್ಪ, ಪೂಜಾ ಸೇರಿದಂತೆ ಹಲವರು ಹಾಗೂ ಗ್ರಾಮಸ್ಥರಾದ ಪ್ರಕಾಶ್, ಮಂಜುನಾಥ್, ಮುನಿರಾಜು, ರಾಜಣ್ಣ, ಅಶ್ವತ್ಥಪ್ಪ, ಆನಂದ್, ಪುನೀತ್, ಚನ್ನಕೃಷ್ಣ, ಸುದರ್ಶನ, ವಿಜಯ್ ಕುಮಾರ್, ಮನೋಜ್ ಇದ್ದರು.

