Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೆರೆಗಳಿಗೆ ಎಚ್.ಎನ್. ವ್ಯಾಲಿ ನೀರನ್ನು ಸಮರ್ಪಕವಾಗಿ ಹರಿಸಿ ತುಂಬಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಒತ್ತಾಯಿಸಿದರು.
In English: Raita Sangha taluk president Taduru Manjunath said the Chikkaballapur district collector has sought 15 days to act on farmers’ demand for proper HN Valley water flow into taluk tanks, after a farmer delegation raised the issue — meaning the September 7 bike rally and protest planned by some organisations will be reassessed once that window passes, based on what action the district administration takes.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡತೇಕಹಳ್ಳಿ, ಪಲಿಚೆರ್ಲು ಹಾಗೂ ಅಬ್ಲೂಡು ಪಂಚಾಯಿತಿ ವ್ಯಾಪ್ತಿಯ ರೈತರು ಬಂಡೆಮ್ಮನ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ ಎಂದು ತಮ್ಮ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆ ಆಲಿಸಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಬರದ ಪರಿಸ್ಥಿತಿ ಮುಂದುವರಿದಿರುವುದರಿಂದ ಕೆರೆಗಳಿಗೆ ಎಚ್.ಎನ್. ವ್ಯಾಲಿ ನೀರು ಸಮರ್ಪಕವಾಗಿ ಹರಿಸಿದರೆ ಅಂತರ್ಜಲ ಮಟ್ಟ ಸುಧಾರಿಸುವುದರ ಜತೆಗೆ ಕೃಷಿ ಮತ್ತು ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ರೈತ ಮುಖಂಡರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಚರ್ಚಿಸಿದ್ದು, ಸಮಸ್ಯೆ ಬಗೆಹರಿಸಲು 15 ದಿನಗಳ ಕಾಲಾವಕಾಶ ನೀಡುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ. ಹೀಗಾಗಿ ಸದ್ಯಕ್ಕೆ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳದೆ, ಈ ಅವಧಿಯಲ್ಲಿ ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಕೈಗೊಳ್ಳುವ ಕ್ರಮವನ್ನು ಗಮನಿಸಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ಕುರಿತು ತೀರ್ಮಾನಿಸಲಾಗುವುದು ಎಂದರು.
ಅಕ್ರಮ ನೀರೆತ್ತುವಿಕೆ ತಡೆಗೆ ಆಗ್ರಹ
ಎಚ್.ಎನ್. ವ್ಯಾಲಿ ನೀರು ಹರಿಯುವ ಮಾರ್ಗದಲ್ಲಿ ಕೆಲವರು ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡು ನೀರು ಎತ್ತಿಕೊಳ್ಳುತ್ತಿರುವುದರಿಂದ ಕೆಳಭಾಗದ ಕೆರೆಗಳಿಗೆ ನೀರು ತಲುಪುತ್ತಿಲ್ಲ ಎಂಬ ದೂರುಗಳಿವೆ. ಕೋಲಾರ ಭಾಗದಲ್ಲಿ ಅಕ್ರಮ ನೀರೆತ್ತುವಿಕೆ ನಿಯಂತ್ರಿಸಲು ಟಾಸ್ಕ್ ಫೋರ್ಸ್ ಮಾದರಿಯ ವ್ಯವಸ್ಥೆ ಮಾಡಿರುವಂತೆ ಶಿಡ್ಲಘಟ್ಟದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಾದೂರು ಮಂಜುನಾಥ್ ಆಗ್ರಹಿಸಿದರು.
ಈ ಹಿಂದೆ ಅಧಿಕಾರಿಗಳೊಂದಿಗೆ ತೆರಳಿ ಅಕ್ರಮ ಮೋಟಾರ್ಗಳನ್ನು ತೆರವುಗೊಳಿಸಿದ ಸಂದರ್ಭಗಳಿದ್ದು, ಕೆಲವು ವೇಳೆ ಅಧಿಕಾರಿಗಳು ಮತ್ತು ರೈತರ ನಡುವೆ ಗೊಂದಲ ಉಂಟಾಗಿದೆ. ಇಂತಹ ಪರಿಸ್ಥಿತಿ ಮರುಕಳಿಸದಂತೆ ನಿಯಮಬಾಹಿರವಾಗಿ ನೀರು ಎತ್ತುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸೋಮವಾರ ನಡೆದ ರೈತ ಮುಖಂಡರ ಸಭೆಯಲ್ಲಿ ತಮ್ಮ ರೈತ ಸಂಘಟನೆ, ರಾಜ್ಯ ಕಾರ್ಯಾಧ್ಯಕ್ಷ ಬೈರೇಗೌಡ ಹಾಗೂ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಸಭೆ ಮುಂದೂಡುವ ವಿಚಾರವನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಯಾವುದೇ ಸಭೆಯನ್ನು ತಡೆಯುವುದು ಅಥವಾ ಯಾರನ್ನೂ ವಿರೋಧಿಸುವುದು ತಮ್ಮ ಉದ್ದೇಶವಲ್ಲ. ರೈತರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ಮಾತುಕತೆಗೆ ಅವಕಾಶ ನೀಡುವುದೂ ಹೋರಾಟದ ಭಾಗವೇ ಆಗಿದೆ ಎಂದು ಸ್ಪಷ್ಟಪಡಿಸಿದರು.
ಸೆಪ್ಟೆಂಬರ್ 7ರಂದು ಕೆಲ ರೈತ ಸಂಘಟನೆಗಳು ನೀರಿಗಾಗಿ ಹೋರಾಟ ನಡೆಸಲು ನಿರ್ಧರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲಾಧಿಕಾರಿಗಳು ಕೇಳಿರುವ 15 ದಿನಗಳ ಕಾಲಾವಕಾಶವನ್ನು ಮೊದಲು ನೀಡಲಾಗುವುದು. ಈ ಅವಧಿಯಲ್ಲಿ ಕೆರೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮವನ್ನು ಪರಿಶೀಲಿಸಿ, ಬಳಿಕ ರೈತ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ರೈತರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ವೈಯಕ್ತಿಕ ಭಿನ್ನಾಭಿಪ್ರಾಯ ಹಾಗೂ ಆರೋಪ–ಪ್ರತ್ಯಾರೋಪಗಳನ್ನು ಬದಿಗಿಟ್ಟು, ತಾಲ್ಲೂಕಿನ ಕೆರೆಗಳು ತುಂಬಬೇಕು ಮತ್ತು ರೈತರಿಗೆ ನೀರು ದೊರೆಯಬೇಕು ಎಂಬ ಉದ್ದೇಶದಿಂದ ಎಲ್ಲರೂ ಒಗ್ಗೂಡಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕೆರೆಗಳಿಗೆ ಸಮರ್ಪಕವಾಗಿ ಎಚ್.ಎನ್. ವ್ಯಾಲಿ ನೀರು ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಜಿಲ್ಲಾ ಕಾರ್ಯದರ್ಶಿ ವೇಣು, ತಾಲ್ಲೂಕು ಜಂಟಿ ಕಾರ್ಯದರ್ಶಿ ಬಸವರಾಜ, ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಕೆಂಪಣ್ಣ, ತಾಲ್ಲೂಕು ಗೌರವ ಅಧ್ಯಕ್ಷ ನಾರಾಯಣಸ್ವಾಮಿ, ರೈತರಾದ ಕೆಂಪರೆಡ್ಡಿ, ಗಂಗಪ್ಪ, ವಾಸು, ಮಂಜುನಾಥ್ ಉಪಸ್ಥಿತರಿದ್ದರು.

