ಸೆ.7ಕ್ಕೆ ಬೃಹತ್ ಬೈಕ್ ರ‍್ಯಾಲಿ: ಎಲ್ಲ ಕೆರೆಗಳಿಗೂ ಎಚ್.ಎನ್. ವ್ಯಾಲಿ ನೀರು ಹರಿಸಲು ಆಗ್ರಹ

- Advertisement -
- Advertisement -

Sidlaghatta : “ನಮ್ಮ ನೀರು ನಮ್ಮ ಹಕ್ಕು, ಎಚ್.ಎನ್. ವ್ಯಾಲಿ ನೀರು ನಮ್ಮ ಕೆರೆಗಳಿಗೆ” ಎಂಬ ಘೋಷವಾಕ್ಯದೊಂದಿಗೆ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಎಚ್.ಎನ್. ವ್ಯಾಲಿ ನೀರು ಹರಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 7ರಂದು ಬೃಹತ್ ಬೈಕ್ ರ‍್ಯಾಲಿ ಹಾಗೂ ಪ್ರತಿಭಟನೆ ನಡೆಸಲು ವಿವಿಧ ಪ್ರಗತಿಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನಿರ್ಧರಿಸಿದೆ.

In English: A joint action committee of progressive organisations has decided to hold a large bike rally and protest on September 7, demanding HN Valley water be released to all tanks in the taluk. Leaders alleged that of the nine tanks targeted in the project’s first phase, only three have received water so far, even as canal desilting work is complete, and flagged illegal large-scale water lifting alongside slow progress on the Yettinahole project.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸೆ. 7ರಂದು ಪ್ರವಾಸಿ ಮಂದಿರದಿಂದ ಬೈಕ್ ರ‍್ಯಾಲಿ ಆರಂಭಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ತಾಲ್ಲೂಕಿನ ಮೊದಲ ಹಂತದ ಎಚ್.ಎನ್. ವ್ಯಾಲಿ ಯೋಜನೆಯಡಿ ಒಟ್ಟು ಒಂಬತ್ತು ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿತ್ತು. ಕಾಲುವೆ ಹಾಗೂ ಕೆರೆಗಳ ಕಟ್ಟೆಗಳ ಹೂಳೆತ್ತುವ ಕಾಮಗಾರಿ ಪೂರ್ಣಗೊಂಡಿದ್ದರೂ, ಇದುವರೆಗೆ ಸಮರ್ಪಕವಾಗಿ ನೀರು ಹರಿಸಿಲ್ಲ. ಮೂರು ಕೆರೆಗಳಿಗೆ ಮಾತ್ರ ನೀರು ಹರಿಸಲಾಗಿದ್ದು, ಉಳಿದ ಕೆರೆಗಳು ಖಾಲಿಯಾಗಿವೆ ಎಂದು ಸಭೆಯಲ್ಲಿ ಮುಖಂಡರು ಆರೋಪಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ 24 ಕೆರೆಗಳಿಗೆ ಎಚ್.ಎನ್. ವ್ಯಾಲಿ ನೀರು ಹರಿಸಲಾಗುತ್ತಿದೆ. ಆದರೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಆದ್ದರಿಂದ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಆದ್ಯತೆಯ ಮೇರೆಗೆ ನೀರು ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಎರಡನೇ ಹಂತದ ಯೋಜನೆಯಡಿ ಶಿಡ್ಲಘಟ್ಟ ತಾಲ್ಲೂಕಿನ 45 ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈವರೆಗೆ ಗಮನಾರ್ಹ ಪ್ರಗತಿ ಕಂಡುಬಂದಿಲ್ಲ. ಮೊದಲ ಹಂತದ ಯೋಜನೆಯಲ್ಲಿಯೇ ನಿಗದಿತ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗಿಲ್ಲ ಎಂದು ಮುಖಂಡರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ ನೀರು ಬಳಕೆಗೆ ಆಕ್ರೋಶ

ಎಚ್.ಎನ್. ವ್ಯಾಲಿ ಯೋಜನೆಯ ನೀರನ್ನು ಅಕ್ರಮವಾಗಿ ಬಳಸುತ್ತಿರುವ ಬಲಾಢ್ಯರ ವಿರುದ್ಧವೂ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಅಲ್ಪ ಪ್ರಮಾಣದಲ್ಲಿ ನೀರು ಬಳಸುವ ರೈತರ ಮೋಟಾರ್‌ಗಳನ್ನು ತೆರವುಗೊಳಿಸುವ ಅಧಿಕಾರಿಗಳು, ನೂರಾರು ಎಕರೆ ಪ್ರದೇಶಕ್ಕೆ ಅಕ್ರಮವಾಗಿ ನೀರು ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಖಂಡರು ಆರೋಪಿಸಿದರು.

ಸುಮಾರು ₹5 ಕೋಟಿ ವೆಚ್ಚದಲ್ಲಿ 200 ಅಡಿ ಆಳಕ್ಕೆ ಪಂಪ್ ಅಳವಡಿಸಿ ಸುಮಾರು 250 ಎಕರೆ ಭೂಮಿಗೆ ನೀರು ಹಾಯಿಸಲಾಗುತ್ತಿದೆ ಎಂಬ ಆರೋಪವಿದ್ದು, ಈ ಕುರಿತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಅಕ್ರಮ ನೀರು ಬಳಕೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಎತ್ತಿನಹೊಳೆ ಯೋಜನೆಯ ವಿಳಂಬದ ಬಗ್ಗೆಯೂ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಹಲವು ವರ್ಷಗಳಿಂದ ಯೋಜನೆ ಪೂರ್ಣಗೊಳ್ಳುವ ಕುರಿತು ವಿವಿಧ ಅವಧಿಗಳ ಭರವಸೆ ನೀಡಲಾಗುತ್ತಿದ್ದರೂ, ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ದ್ವಿತೀಯ ಹಂತದ ಸಂಸ್ಕರಿಸಿದ ನೀರನ್ನಾದರೂ ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೆ ಶೇ 30ರಿಂದ 50ರಷ್ಟು ಹರಿಸಬೇಕು ಎಂದು ಒತ್ತಾಯಿಸಲಾಯಿತು.

ಕಾಲುವೆಗಳಲ್ಲಿ ಗಿಡಗಂಟೆಗಳು ಬೆಳೆದು ನೀರು ಸರಾಗವಾಗಿ ಹರಿಯದ ಸ್ಥಿತಿ ನಿರ್ಮಾಣವಾಗಿದೆ. ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾಡಳಿತ ಕಾಲುವೆಗಳನ್ನು ತಕ್ಷಣ ಸ್ವಚ್ಛಗೊಳಿಸಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು. ಕೆರೆಗಳಿಗೆ ನೀರು ಹರಿಸಿದರೆ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬೋರ್‌ ವೆಲ್‌ಗಳ ಮರುಪೂರಣಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.

ಸೆ. 7ರ ಹೋರಾಟದಲ್ಲಿ ತಾಲ್ಲೂಕಿನ ರೈತರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮುಖಂಡರು ಕರೆ ನೀಡಿದರು.

ಸಭೆಯಲ್ಲಿ ರೈತ ಸಂಘಟನೆಗಳ ಮುಖಂಡರಾದ ಟಿ.ಕೆ. ಅರುಣ್ ಕುಮಾರ್, ಮುನಿಕೆಂಪಣ್ಣ, ಕೋಟೆ ಚೆನ್ನೇಗೌಡ, ದ್ಯಾವಪ್ಪ, ನಾರಾಯಣಸ್ವಾಮಿ, ರವಿಪ್ರಕಾಶ್, ಪ್ರತೀಶ್, ಜಯಂತಿ ಗ್ರಾಮದ ನಾರಾಯಣಸ್ವಾಮಿ, ಶಂಕರ್ ನಾರಾಯಣ, ಶ್ರೀನಿವಾಸ್ ಹಾಗೂ ದಲಿತ ಸಂಘಟನೆಗಳ ಮುಖಂಡರಾದ ಈ ಧರೆ ಪ್ರಕಾಶ್, ಗೊರ್ಲಪ್ಪ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -