Sidlaghatta : ಕ್ರೀಡೆಗಳು ಜಾತಿ, ಮತ, ಧರ್ಮ ಹಾಗೂ ದೇಶದ ಗಡಿಗಳನ್ನು ಮೀರಿ ಜನರನ್ನು ಒಂದುಗೂಡಿಸುವುದರೊಂದಿಗೆ ಸಾಮರಸ್ಯ ಮತ್ತು ಬಾಂಧವ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜ್ಞಾನಜ್ಯೋತಿ ಪ್ರೌಢಶಾಲೆ ಮತ್ತು PU ಕಾಲೇಜಿನ ಪ್ರಿನ್ಸಿಪಲ್ ಡಾ. ಮನುಶ್ರೀರಾಜೀವ್ ಹೇಳಿದರು.
ತಾಲ್ಲೂಕಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ರಾಜ್ಯ ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜ್ಞಾನಜ್ಯೋತಿ ಪ್ರೌಢಶಾಲೆ ಮತ್ತು PU ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ 14 ವರ್ಷದೊಳಗಿನ ಬಾಲಕ-ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಎರಡನ್ನೂ ಸಮಾನವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವವೇ ನಿಜವಾದ ಗೆಲುವು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಯುವುದರ ಜತೆಗೆ ದೈಹಿಕ ಮತ್ತು ಮಾನಸಿಕ ಸದೃಢತೆ ಹೆಚ್ಚುತ್ತದೆ. ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ವೃದ್ಧಿಯಾಗುತ್ತವೆ” ಎಂದು ತಿಳಿಸಿದರು.
ಬೆಂಗಳೂರು ವಿಭಾಗದ ವ್ಯಾಪ್ತಿಯ 12 ಜಿಲ್ಲೆಗಳ ಬಾಲಕ-ಬಾಲಕಿಯರ 24 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ನಮ್ಮ ವಿದ್ಯಾಸಂಸ್ಥೆಯಲ್ಲಿ ವಿಭಾಗ ಮಟ್ಟದ ಕ್ರೀಡಾಕೂಟ ಆಯೋಜಿಸಲು ಅವಕಾಶ ಕಲ್ಪಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳನ್ನೂ ನಮ್ಮವರಂತೆ ಪರಿಗಣಿಸಿ, ಯಾವುದೇ ಅಡಚಣೆ ಅಥವಾ ತಾರತಮ್ಯವಿಲ್ಲದೆ ಕ್ರೀಡಾಕೂಟ ನಡೆಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸ್ವಾಮಿ, DDPI ಕಚೇರಿಯ ರಮೇಶ್, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ರವಿಕುಮಾರ್, ದೈಹಿಕ ಶಿಕ್ಷಕರ ಸಂಘದ ರಾಜ್ಯ ಖಜಾಂಚಿ ಡಿ.ವಿ. ಬಾಲರಾಜ್, ಸಂಘದ ಅಧ್ಯಕ್ಷ ಪಿ.ಸಿ. ಮಾರುತಿ ಹಾಗೂ ಜ್ಞಾನಜ್ಯೋತಿ ಶಾಲೆಯ ಮುಖ್ಯಶಿಕ್ಷಕ ಅಂಜನಮೂರ್ತಿ ಉಪಸ್ಥಿತರಿದ್ದರು.
ವಯೋಮಿತಿ ನಿಯಮ ಉಲ್ಲಂಘನೆ ಆರೋಪ: ಒಂದು ಬಾಲಕರ ತಂಡ ಅನರ್ಹ
ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಯೋಮಿತಿ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಬಾಲಕರ ತಂಡವನ್ನು ಪಂದ್ಯಾವಳಿಯಿಂದ ಹೊರಗಿಡಲು ಆಯೋಜಕರು ನಿರ್ಧರಿಸಿದರು.
ಕೋಲಾರ ಜಿಲ್ಲಾ ಬಾಲಕರ ತಂಡದಲ್ಲಿ 14 ವರ್ಷ ಮೇಲ್ಪಟ್ಟ ವಿದ್ಯಾರ್ಥಿಯೊಬ್ಬರು ಆಡುತ್ತಿದ್ದಾರೆ ಎಂದು ಆರೋಪಿಸಿ ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ ತಂಡಗಳ ದೈಹಿಕ ಶಿಕ್ಷಕರು ಪಂದ್ಯಾವಳಿಯ ಆಯೋಜಕರು ಮತ್ತು ತೀರ್ಪುಗಾರರೊಂದಿಗೆ ವಾಗ್ವಾದ ನಡೆಸಿದರು.
ಪಂದ್ಯಾವಳಿ ಆರಂಭದಲ್ಲೇ ಆಕ್ಷೇಪಣೆ ಸಲ್ಲಿಸಬೇಕಿತ್ತು ಎಂಬ ವಿಚಾರವಾಗಿ ಕೆಲಕಾಲ ಮಾತಿನ ಚಕಮಕಿ ನಡೆದು ಪಂದ್ಯಗಳು ಸ್ಥಗಿತಗೊಂಡವು. ಬಳಿಕ ವಯೋಮಿತಿ ನಿಯಮ ಉಲ್ಲಂಘನೆಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಬಾಲಕರ ತಂಡವನ್ನು ಪಂದ್ಯಾವಳಿಯಿಂದ ಹೊರಗಿಡಲು ನಿರ್ಧರಿಸಲಾಯಿತು.
ಈ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ರವಿಕುಮಾರ್ ಸ್ಪಷ್ಟಪಡಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
In English: The Bengaluru division-level under-14 boys’ and girls’ volleyball tournament was inaugurated on Tuesday at the Jnanajyothi Vidyasamsthe premises in Sidlaghatta taluk by principal Dr. Manushree Rajeev, with 24 teams from 12 districts taking part; it was organised by the Sports Department, the Chikkaballapura district administration, Zilla Panchayat and the School Education Department. During the tournament, students and physical education teachers from two other districts alleged that the Kolar boys’ team included an over-14 player and argued with organisers, halting matches for a while; after the age-limit violation was confirmed, organisers decided to remove the Kolar boys’ team and said a report would be sent to senior officials.








