Malamachanahalli, Sidlaghatta : ಮಕ್ಕಳನ್ನು ಚಿಕ್ಕಂದಿನಿಂದಲೇ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ದೈಹಿಕ ಹಾಗು ಮಾನಸಿಕವಾಗಿ ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ ಎಂದು ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ವಿವಿಧ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪಾಠದ ಜೊತೆ ಕ್ರೀಡೆಗಳು ಬಹುಮುಖ್ಯವಾಗಿದ್ದು, ವಿದ್ಯಾಭ್ಯಾಸದ ಜೊತೆ ಕ್ರೀಡೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದೆ ಆದಲ್ಲಿ ಅಂಥಹವರಿಗೆ ಉತ್ತಮವಾದ ಭವಿಷ್ಯವಿದೆ. ಕ್ರೀಡಾಪಟುಗಳಿಗೆ ನಮ್ಮ ದೇಶದಲ್ಲಿ ಉತ್ತಮ ಗೌರವವಿದೆ ಎಂದು ತಿಳಿಸಿದರು.
ಬಿಜೆಪಿ ಎಸ್.ಟಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಬಡವರ ಮಕ್ಕಳಾದರೂ ಪ್ರತಿಭಾವಂತರಿರುತ್ತಾರೆ. ಅಂಥಹವರಿಗೆ ಈ ರೀತಿ ಸಹಕಾರ ನೀಡಿದಲ್ಲಿ ಬಹಳ ಉಪಯುಕ್ತವಾಗುತ್ತದೆ, ಮಕ್ಕಳು ಸಹ ಪಾಠದ ಜೊತೆ ಆಟವನ್ನು ಮೈಗೂಡಿಸಿಕೊಂಡು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕ್ರೀಡಾ ಸಾಮಗ್ರಿಗಳನ್ನು ಬಳಸಿಕೊಂಡು ಶಾಲೆಗೆ ಕೀರ್ತಿಯನ್ನು ತರಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ರೀಡಾಪಟು ಜಯಂತಿ ಗ್ರಾಮ ನಾರಾಯಣಸ್ವಾಮಿ ರವರನ್ನು ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು
ಶಿಕ್ಷಕರಾದ ಬೈರಾರೆಡ್ಡಿ, ಮೂರ್ತಿ, ಸವಿತಾ, ಮಮತಾ, ಸುಷ್ಮಾ, ಗ್ರಾಮಸ್ಥರಾದ ನಾಗರಾಜು, ನವೀನ್ ಹಾಜರಿದ್ದರು.