Sidlaghatta : ಗ್ರಾಮ ಪಂಚಾಯಿತಿಯ ಅಭಿವೃದ್ದಿಯಲ್ಲಿ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಪಾತ್ರ ಬಹಳ ಮುಖ್ಯ. ಪಿಡಿಒ ಅವರು ಸರ್ಕಾರದ ಪ್ರತಿನಿಯಾಗಿರಲಿದ್ದು ಮಿಕ್ಕಂತೆ ಎಲ್ಲ ಸದಸ್ಯರ ಹೊಣೆ ಹೆಚ್ಚಿರುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ ತಿಳಿಸಿದರು.
ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕಿನ ಗ್ರಾಮಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಅವರು ಮಾತನಾಡಿದರು.
ಬಹಳಷ್ಟು ಮಂದಿ ಮೊದಲ ಭಾರಿಗೆ ಅಧ್ಯಕ್ಷ ಉಪಾಧ್ಯಕ್ಷರಾಗಿರುತ್ತಾರೆ ಅಥವಾ ಎರಡು ಮೂರನೇ ಭಾರಿ ಆಯ್ಕೆ ಆಗಿರುತ್ತಾರೆ. ಆದರೆ ಎಲ್ಲರಿಗೂ ತರಬೇತಿ ಅಗತ್ಯವಿದೆ. ನಾವು ಹೊಸಬರಲ್ಲ ನಮಗೆ ಎಲ್ಲವೂ ಗೊತ್ತಿಲ್ಲ ಎಂಬ ಭಾವನೆ ಬೇಡ. ಪಂಚಾಯಿತಿಗೆ ಸರ್ಕಾರದಿಂದ ನಾನಾ ರೂಪದ ಅನುದಾನ ಬರಲಿದೆ. ಜತೆಗೆ ಸ್ಥಳೀಯವಾಗಿ ಕಂದಾಯ ರೂಪದಲ್ಲಿ ಹಣ ಸಂಗ್ರಹ ಆಗಲಿದೆ. ಹಣಕಾಸಿನ ನಿರ್ವಹಣೆ, ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಅಭಿವೃದ್ದಿಗೆ ಪೂರಕ ಯೋಜನೆ ರೂಪಿಸುವುದು ಸೇರಿ ಇನ್ನಷ್ಟು ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಎಲ್ಲರೂ ತರಬೇತಿ ಅವಧಿಯಲ್ಲಿ ಹಾಜರಿದ್ದು ತರಬೇತಿ ಪಡೆದುಕೊಳ್ಳಬೇಕು ಮತ್ತು ನಿಮ್ಮಲ್ಲಿನ ಅನುಮಾನ ಗೊಂದಲಗಳನ್ನು ಸಂಪನ್ಮೂಲ ವ್ಯಕ್ತಿಗಳ ಬಳಿ ಕೇಳಿ ಬಗೆಹರಿಸಿಕೊಳ್ಳಿ ಎಂದು ಮನವಿ ಮಾಡಿದರು.
ತರಬೇತಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಭಾಗವಹಿಸಿದ್ದರು. ವಿಕೇಂದ್ರೀಕೃತ ತರಬೇತಿ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣಪ್ಪ ಹಾಜರಿದ್ದರು.