Home News ಶಿಡ್ಲಘಟ್ಟ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ

ಶಿಡ್ಲಘಟ್ಟ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ

0
Sidlaghatta Grama Panchayat Election Results 2020

ಗ್ರಾಮ ಪಂಚಾಯಿತಿ ಚುನಾವಣೆಗಳು ಮುಂಬರುವ ಚುನಾವಣೆಗಳ ದಿಕ್ಸೂಚಿಯೆಂದೇ ಭಾವಿಸಿರುವುದರಿಂದ ಕ್ಷೇತ್ರದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಬುಧವಾರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶವು ಹೊರಬಿದ್ದಿದ್ದು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ.

ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾದ ಮತ ಎಣಿಕೆ ಕಾರ್ಯದಲ್ಲಿ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ ಅತಿ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಕೈ ಕೊಟ್ಟಂತಿದೆ.

ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿ.ಮುನಿಯಪ್ಪ ಅವರ ಹುಟ್ಟೂರು ಹಂಡಿಗನಾಳ ಗ್ರಾಮ ಪಂಚಾಯಿತಿ ಈವರೆಗೂ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಮಂದಿ ಜೆಡಿಎಸ್ ಬೆಂಬಲಿತರು ಜಯಶೀಲರಾಗುವ ಮೂಲಕ ದೋಸೆ ತಿರುವಿಹಾಕಿದಂತಾಗಿದೆ.

ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಸ್ವಗ್ರಾಮ ಮೇಲೂರು ಗ್ರಾಮ ಪಂಚಾಯಿತಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡುವ ಮೂಲಕ ಪಂಚಾಯಿತಿಯನ್ನು ಜೆಡಿಎಸ್ ವಶದಲ್ಲಿರುವಂತೆ ಭದ್ರಪಡಿಸಿಕೊಂಡಿದ್ದಾರೆ.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ ಅವರ ಪತ್ನಿ ಮಂಜುಳ ಸುರೇಂದ್ರ ಅವರು ಸ್ವಗ್ರಾಮ ಕಂಬದಹಳ್ಳಿಯಲ್ಲಿ ಸ್ಪರ್ಧಿಸಿದ್ದು, ಕೇವಲ 67 ಮತಗಳನ್ನು ಮಾತ್ರ ಪಡೆದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಬೆಂಬಲಿತ ಗೀತಾಂಜಲಿ ಅವರು 433 ಮತಗಳನ್ನು ಪಡೆದು ಗೆಲುವನ್ನು ಪಡೆದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version