Home News ತುಂಬಿ ಹರಿದ ರಾಳ್ಳಕೆರೆ , ಕೆರೆಗೆ ಬಾಗಿನ ಅರ್ಪಣೆ

ತುಂಬಿ ಹರಿದ ರಾಳ್ಳಕೆರೆ , ಕೆರೆಗೆ ಬಾಗಿನ ಅರ್ಪಣೆ

0

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಪಕ್ಕದಲ್ಲಿರುವ ರಾಳ್ಳಕೆರೆಯು ತುಂಬಿದ್ದು, ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗುವ ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿದೆ. ಅದಕ್ಕಾಗಿ ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ, ವಾಹನ ಸಂಚಾರಕ್ಕೆ ಹಳ್ಳಿಗಳ ಮೂಲಕ ಸುತ್ತು ಮಾರ್ಗವನ್ನು ಕಲ್ಪಿಸಲಾಗಿದೆ.

 ರಾಳ್ಳಕೆರೆಯು ತುಂಬಿ ಹರಿಯುತ್ತಿರುವುದಕ್ಕೆ ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಗೂ ಮುಖಂಡರು ಭಾನುವಾರ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ಜಯರಾಮ್, “ದೀಪಾವಳಿ ಕಳೆದ ಮೇಲೆ ದೀಪವಿಟ್ಟರೂ ಮಳೆ ಬರದು ಎಂಬ ಗಾದೆ ಮಾತು ಚಾಲ್ತಿಯಲ್ಲಿದೆ. ಆದರೆ ವರಣ ದೇವ ಅದನ್ನು ಸುಳ್ಳು ಮಾಡಿದ್ದಾನೆ. ಎಚ್.ಎನ್ ವ್ಯಾಲಿ ನೀರು ಒಂದಷ್ಟು ಕೆರೆಗಳನ್ನು ತುಂಬಿಸಿತ್ತು, ನಂತರ ಬಂದ ಮಳೆಯಿಂದಾಗಿ ತಾಲ್ಲುಕಿನ ಬಹುತೇಕ ಎಲ್ಲಾ ಕೆರೆಗಳೂ ನೀರು ತುಂಬಿಕೊಂಡಿವೆ. ಕೆಲವು ಕೋಡಿ ಹರಿಯುತ್ತಿವೆ. ರೈತರಿಗೆ ಮಳೆಯಿಂದಾಗಿ ಅಪಾರ ನಷ್ಟವುಂಟಾದರೂ, ಐವತ್ತು ವರ್ಷಗಳಿಂದ ನಾವು ನೋಡಿರದ ರೀತಿಯಲ್ಲಿ ಈಗ ಕೆರೆಗಳು ತುಂಬಿವೆ. ಅದರಿಂದ ಸಂತೋಷದಿಂದ ನಾವು ಗಂಗಮ್ಮ ತಾಯಿಗೆ ಪೂಜೆ ಸಲ್ಲಿಸಿದ್ದೇವೆ.

 ಸುಮಾರು ಹತ್ತು ಕೆರೆಗಳು ಕೋಡಿ ಹರಿದು ರಾಳ್ಳಕೆರೆಗೆ ಬಂದು ಅದೀಗ ಕೋಡಿ ಹರಿಯುತ್ತಿದೆ. ಜಿಲ್ಲೆಯ ಕಂದವಾರ ಕೆರೆ, ಗೋಪಾಲಕೃಷ್ಣ ಕೆರೆ, ಮಂಚನಬೆಲೆ, ಮುಷ್ಟೂರು, ರಂಗಧಾಮನಕೆರೆ, ಜಾತವಾರ, ಕೇಶವಾರ ಕೆರೆಗಳು ತುಂಬಿ ರಾಳ್ಳಕೆರೆಗೆ ನೀರು ಹರಿದು ಬಂದು ಅದೂ ಕೂಡ ಕೋಡಿ ಬಿದ್ದಿದೆ. ಇಲ್ಲಿಂದ ನೀರು ಹರಿದು ಬೆಳ್ಳೂಟಿ ಕೆರೆಗೆ ಹೋಗುತ್ತಿದೆ. ಬೆಳ್ಳೂಟಿ ಕೆರೆ ಕೂಡ ಇಂದು ಬೆಳಗ್ಗೆ ಕೋಡಿ ಹರಿದು ಭದ್ರನ ಕೆರೆಗೆ ನೀರು ಹರಿದು ಹೋಗುತ್ತಿದೆ. ಇದು ನಮ್ಮ ತಾಲ್ಲೂಕಿಗೆ ವರದಾನವಾಗಿದೆ” ಎಂದರು.

Sidlaghatta Handiganala Rallakere Lake Rain Water

 ಗ್ರಾಮದ ಹಿರಿಯರಾದ ಗೋವಿಂದರಾಜು ಮಾತನಾಡಿ, “ರಾಳ್ಳಕೆರೆ 51 ಎಕರೆ 20 ಗುಂಟೆಯಷ್ಟಿದೆ. ನಾನೂ ಸೇರಿದಂತೆ ಹನ್ನೆರಡು ಮಂದಿ ರೈತರು ಸ್ವಲ್ಪ ಭಾಗವನ್ನು ಒತ್ತುವರಿ ಮಾಡಿದ್ದೆವು. ಈಚೆಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸರ್ವೆ ಅಧಿಕಾರಿಗಳು ಬಂದು ಒತ್ತುವರಿ ತೆರವುಗೊಳಿಸಲು ತಿಳಿಸಿದರು. ಅದರಂತೆ ನಾವೆಲ್ಲಾ ತೆರವುಗೊಳಿಸಿದೆವು. ಸರ್ಕಾರದಿಂದ ಬದುನ್ನು ನಿರ್ಮಾಣ ಮಾಡಿದ್ದರು. ಇದೀಗ ಕೆರೆ ತುಂಬಿ ಹರಿಯುತ್ತಿದೆ. ಅಮ್ಮನಕೆರೆ ಮತ್ತು ರಾಳ್ಳಕೆರೆಯ ಅಚ್ಚುಕಟ್ಟಿನಲ್ಲಿ ಸುಮಾರು ಐದು ನೂರು ಎಕರೆಯಷ್ಟು ಜಮೀನುಗಳಿವೆ. ಶಿಡ್ಲಘಟ್ಟ ಬೆಂಗಳೂರು ನಡುವಿನ ಮುಖ್ಯ ರಸ್ತೆಯಲ್ಲಿ ಇದುವರೆಗೂ ಸಮರ್ಪಕವಾಗಿ ಮೋರಿ ನಿರ್ಮಾಣ ಮಾಡದ ಕಾರಣ ಇದೀಗ ರಸ್ತೆ ಮೇಲೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗಿದೆ. ಈಗಲಾದರೂ ಜನಪ್ರತಿನಿಧಿಗಳು ಉತ್ತಮವಾದ ಸೇತುವೆ ನಿರ್ಮಿಸಲಿ, ನಷ್ಟವುಂಟಾಗಿರುವ ರೈತರಿಗೆ ಪರಿಹಾರ ನೀಡಲಿ. ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವವರು ಸ್ವಯಂ ಪ್ರೇರಿತರಾಗಿ ತೆರವು ಮಾಡಬೇಕು” ಎಂದು ಹೇಳಿದರು.

 ಗ್ರಾಮ ಪಂಚಾಯಿತಿ ಸದಸ್ಯ ರಸಿಕ ನಾರಾಯಣಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಲೆಕ್ಕಿಗ ಯಶಸ್ವಿನಿ, ಮುಖಂಡರಾದ ಅರುಣ್ ಕುಮಾರ್, ರಾಮಚಂದ್ರಪ್ಪ, ನಾರಾಯಣಸ್ವಾಮಿ, ನರಸಿಂಹಪ್ಪ, ವೆಂಕಟಪ್ಪ, ಸುಬ್ರಮಣ್ಯಪ್ಪ, ರಾಮಾಂಜಿನಪ್ಪ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version