Home News ಕೆರೆಗಳ ಒತ್ತುವರಿ ತೆರವುಗೊಳಿಸಲು ರೈತ ಸಂಘದಿಂದ ಒತ್ತಾಯ

ಕೆರೆಗಳ ಒತ್ತುವರಿ ತೆರವುಗೊಳಿಸಲು ರೈತ ಸಂಘದಿಂದ ಒತ್ತಾಯ

0
sidlaghatta hasiru sene taluk office encroachment plea

ಶಿಡ್ಲಘಟ್ಟ ನಗರದಲ್ಲಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಶೀಲ್ದಾರ್ ಬಿ.ಎಸ್.ರಾಜೀವ್ ಅವರಿಗೆ ಮನವಿಯನ್ನು ಸಲ್ಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಮಾತನಾಡಿದರು.

ನಗರದ ಹೊರವಲಯದ ಗೌಡನ ಕೆರೆ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಕೆರೆಗಳ ಒತ್ತುವರಿ ಹಾಗೂ ರಾಜಕಾಲುವೆಗಳು ಮತ್ತು ಕೆರೆಗಳಲ್ಲಿರುವ ಜಾಲಿ ಮರಗಳನ್ನು ತ್ವರಿತವಾಗಿ ತೆರವುಗೊಳಿಸುವ ಕಾರ್ಯದಲ್ಲಿ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

 ಈಗಾಗಲೇ ಎಚ್.ಎನ್.ವ್ಯಾಲಿ ಯೋಜನೆಯಲ್ಲಿ ನಮ್ಮ ತಾಲ್ಲೂಕಿನ ಒಂಬತ್ತು ಕೆರೆಗಳಿದ್ದು, ಈ ಕೆರೆಗಳಲ್ಲಿ ಕೆಲವು ಕೆರೆಗಳು ಮಾತ್ರ ಅಧಂಬರ್ಧ ಕಾಮಗಾರಿ ಮಾಡಿ ನಿಲ್ಲಿಸಿದ್ದಾರೆ. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸದೆ ನೀರು ಬಿಡಲು ತಯಾರಿ ನಡೆಸಿದ್ದಾರೆ. ರಾಜಕಾಲುವೆಗಳನ್ನು ಸಿಕ್ಕಾಪಟ್ಟೆ ಒತ್ತುವರಿ ಮಾಡಿರುವುದರಿಮ್ದ ಕೆರೆಗೆ ಸರಿಯಾಗಿ ನೀರು ಹೋಗದೆ ಪೋಲಾಗುತ್ತಿದೆ. ನಮ್ಮ ತಾಲ್ಲೂಕಿನ ಬಹಳ ದೊಡ್ಡ ಕೆರೆಯಾದ  ಭದ್ರನ ಕೆರೆಯಲ್ಲಿ ಬೆಳೆದಿರುವ ಮರಗಿಡಗಳು ಮತ್ತು ಜಾಲಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿಲ್ಲ. ನಗರದ ಪಕ್ಕದಲ್ಲಿರುವ ಗೌಡನ ಕೆರೆಯನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಯಾವ ಒತ್ತಡಕ್ಕೂ ಮಣಿಯದೇ ಗೌಡನ ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದರು.   

 ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಸ್ವಾಮಿ ಮಾತನಾಡಿ, ಕೆರೆಗಳಲ್ಲಿ ಜಾಲಿ ತೆರವುಗೊಳಿಸುವ ಬಗ್ಗೆ ಈ ಹಿಂದೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ತಾಲ್ಲೂಕು ಆಡಳಿತ ಮರಗಳನ್ನು ತೆಗೆಯಲು ಮೀನಾಮೇಷ ಎಣಿಸುತ್ತಿದ್ದಾರೆ. ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ  ಕುದುಪುಕುಂಟೆ ಕೆರೆ ಮಳೆಗಾಲದಲ್ಲಿ ತುಂಬಿರುತ್ತದೆ. ಆದರೆ ತುಂಬಿದ ನೀರು ಮೂರು ತಿಂಗಳ ಒಳಗೆ ಖಾಲಿಯಾಗಿರುತ್ತದೆ, ಕಾರಣ ಕೆರೆಯಂಗಳವನ್ನು 5 ರಿಂದ 6 ಎಕರೆ ಭೂಮಿಯನ್ನು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದೇ ಆಗಿದೆ. ಸುಮಾರು ನಾಲ್ಕೈದು ಹಳ್ಳಿಗಳ ಜಾನುವಾರುಗಳಿಗೆ ಕುಡಿಯುವ ನೀರು ವರ್ಷಪೂರ್ತಿ ಸಿಗುವಂತೆ ಮಾಡಬೇಕು.

 ತಾಲ್ಲೂಕು ಕಚೇರಿ ಸೇರಿದಂತೆ ಕೆಲವು ಸರ್ಕಾರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ. ರೈತರ ಕೆಲಸ ಮಾಡಿಕೊಡಲು ಕಚೇರಿಗೆ ಅಲೆದಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳು ಹಾಗೂ ಅಧಿಕಾರಿಗಳು ಹಣ ನೀಡುವಂತೆ ಒತ್ತಾಯಿಸುತ್ತಿದ್ದು, ಕೂಡಲೇ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಇಂತಹ ಮಧ್ಯವರ್ತಿಗಳ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರಾಜೀವ್ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿ ಸರ್ವೆ ಇಲಾಖೆಯಲ್ಲಿ ಹಿಂದೆ ಸಿಬ್ಬಂದಿ ಕೊರತೆಯಿತ್ತು. ಈಗ ನಾಲ್ಕು ಜನ ಸಿಬ್ಬಂದಿ ಬಂದಿದ್ದು ಕೂಡಲೇ ಕೆರೆಗಳ ಸರ್ವೇ ಕಾರ್ಯಕ್ಕೆ ಮುಂದಾಗುತ್ತೇವೆ. ಯಾವುದೇ ಮುಲಾಜಿಲ್ಲದೆ ಒತ್ತುವರಿಗಳನ್ನು ತೆರವುಗೊಳಿಸಿ ಕೆರೆಗಳಿಗೆ  ನೀರು ಬರುವಂತಹ ಕಾರ್ಯ ಮಾಡುತ್ತೇವೆ. ಹಾಗೂ ರೈತರ ಕೆಲಸಕ್ಕೆ ಹಣದ ಬೇಡಿಕೆ ಇಟ್ಟಂತಹ ಅಧಿಕಾರಿಗಳು ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು.

 ಕರ್ನಾಟಕ ರಾಜ್ಯ ರೈತ ಸಂಘದ  ಅರುಣ್ ಕುಮಾರ್, ಎಂ ನಾಗರಾಜ್, ಕೋಟೆ ಚನ್ನೇಗೌಡ , ನಾರಾಯಣಸ್ವಾಮಿ, ಲೋಕೇಶ್, ಕೃಷ್ಣಮೂರ್ತಿ, ನಾರಾಯಣಸ್ವಾಮಿ , ಟಿ ಶ್ರೀನಾಥ್, ವೆಂಕಟರಾಯಪ್ಪ, ನಾಗರಾಜ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version