Sidlaghatta : ದೇಶದ ಗಡಿಯಲ್ಲಿ ಹಗಲು–ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಸೇವೆ ಹಾಗೂ ತ್ಯಾಗವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಇಂಡೋ–ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಯೋಧ ಶಿವಕುಮಾರ್ ಹೇಳಿದರು. ನಗರದ ಕದಿರಿಪಾಳ್ಯ ಮತ್ತು ಗಾಂಧಿನಗರದ ಬಳಿ ವಿವಿಧ ಸಂಘಟನೆಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ್ದಾರೆ. ಅವರ ತ್ಯಾಗ ಮತ್ತು ಬಲಿದಾನದ ಫಲವಾಗಿ ನಾವು ಇಂದು ಸ್ವಾತಂತ್ರ್ಯದ ಬದುಕನ್ನು ನಡೆಸುತ್ತಿದ್ದೇವೆ. ದೇಶದ ಗಡಿಯನ್ನು ಕಾಯುವ ಯೋಧರು ಪ್ರತಿಕೂಲ ಹವಾಮಾನದಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸೇವೆಯಿಂದ ದೇಶದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದರು. ಯುವಜನರು ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ಸಂವಿಧಾನದ ಆಶಯಗಳನ್ನು ಅರಿತುಕೊಳ್ಳಬೇಕು ಎಂದು ಶಿವಕುಮಾರ್ ಕರೆ ನೀಡಿದರು.
ರೈತರ ಶ್ರಮದಿಂದ ದೇಶದ ಅಭಿವೃದ್ಧಿ
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, ದೇಶದ ಗಡಿಯನ್ನು ಯೋಧರು ಕಾಯುತ್ತಿದ್ದರೆ, ದೇಶದ ಜನರಿಗೆ ಅನ್ನ ನೀಡುವ ಜವಾಬ್ದಾರಿಯನ್ನು ರೈತರು ನಿರ್ವಹಿಸುತ್ತಿದ್ದಾರೆ. ರೈತರ ಶ್ರಮ ಮತ್ತು ಯೋಧರ ತ್ಯಾಗದಿಂದ ದೇಶದ ಭದ್ರತೆ ಹಾಗೂ ಆಹಾರ ಭದ್ರತೆ ಸಾಧ್ಯವಾಗಿದೆ ಎಂದರು. ರೈತರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸಿ ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಂಡ್ರಹಳ್ಳಿಯ ಇಂಡೋ–ಟಿಬೆಟಿಯನ್ ಬಾರ್ಡರ್ ಪೊಲೀಸ್ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಡ್ಲಘಟ್ಟ ತಾಲ್ಲೂಕು ಟೈಲರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮಣ, ಜೈಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಪಿ.ವಿ.ವೆಂಕಟೇಶ್ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು.
In English: Community organizations held their own 80th Independence Day flag-hoisting near Kadiripalya and Gandhinagar in Sidlaghatta town, with Indo-Tibetan Border Police (ITBP) jawan Shivkumar as chief guest, who urged respect for border troops’ sacrifice and called on youth to learn the country’s freedom-struggle history. Farmers’ union taluk president B. Narayanaswamy spoke on farmers’ role in national food security alongside soldiers’ role in border security; ITBP personnel from Sundrahalli were felicitated at the event.
ಈ ದಿನದ ನೆಹರೂ ಕ್ರೀಡಾಂಗಣದ ಅಧಿಕೃತ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವರದಿಯನ್ನೂ ನೋಡಿ.








